Site icon Kundapra.com ಕುಂದಾಪ್ರ ಡಾಟ್ ಕಾಂ

ಕಲೆಯ ಮೇಲಿನ ಶೃದ್ಧೆ ಅವರ ಬದುಕಿಗೆ ದಾರಿ: ಕೋಟ ಶ್ರೀನಿವಾಸ ಪೂಜಾರಿ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಓರ್ವ ಕಲಾವಿದನ ಬದುಕು ರಂಗಸ್ಥಳದಲ್ಲಿಯೇ ಗುರುತಿಸುವಂತಾಗಬೇಕು. ಕಲೆಯ ಮೇಲಿನ ಶೃದ್ಧೆ ಅವರ ಬದುಕಿಗೆ ದಾರಿಯಾಗಲಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಅವರು ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಯಕ್ಷಗಾನ ಕಲಾವಿದ ಮಾಧವ ನಾಗೂರು ಅಭಿನಂದನಾ ಸಮಿತಿ ವತಿಯಿಂದ ಮಾಧವ ನಾಗೂರು ಅವರ ಯಕ್ಷಯಾನದ ರಜತ ಸಂಭ್ರಮದ ಬೆಳ್ಳಿಪಥ ಅಭಿನಂದನೆ, ಗುರುವಂದನೆ, ನಿಧಿ ಸಮಪರ್ಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯಕ್ಷಗಾನದಲ್ಲಿಬೆಳೆದು ಬರಲು, ಶಕ್ತಿ ತುಂಬಲು ಪ್ರೇರಣೆ, ಪ್ರೋತ್ಸಾಹಿಸುವುದರ ಜತೆಗೆ ಗುರುತಿಸುವ ಕೆಲಸ ಮಾಡುವುದು ಒಳ್ಳೆಯ ಕೆಲಸ. ಯಕ್ಷಗಾನ ಕಲಾವಿದರ ಬದುಕು ರೂಪಿಸುವ ಕೆಲಸವಾಗಬೇಕು. ಈ ಬಗ್ಗೆ ಸರ್ಕಾರದ ನೆಲೆಯಲ್ಲಿ ಹೆಚ್ಚಿನ ಕೆಲಸವಾಗಬೇಕು. ಓರ್ವ ಕಲಾವಿದನಿಗೆ ಸರ್ಕಾರ ನೀಡುವ ಪ್ರಶಸ್ತಿಗಳಿಗಿಂತಲೂ ಅಭಿಮಾನಿಗಳು ನೀಡುವ ಪ್ರಶಸ್ತಿಯೇ ದೊಡ್ಡದು ಎಂದು ಹೇಳಿದರು.

ಇದಕ್ಕೂ ಮುನ್ನ ಹಿರಿಯ ಯಕ್ಷಗಾನ ಕಲಾವಿದ ದಯಾನಂದ ಬಳೆಗಾರ ನಾಗೂರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಾಧವ ನಾಗೂರು ಅಭಿನಂದನಾ ಸಮಿತಿಯ ಅಧ್ಯಕ್ಷ ಆನಂದ ಸಿ. ಕುಂದರ್‌ ಅಧ್ಯಕ್ಷತೆ ವಹಿಸಿದ್ದರು.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ರಾಜೇಶ ಕಾರಂತ, ಉದ್ಯಮಿಗಳಾದ ಶ್ರೀನಿವಾಸ ಜೋಗಿ, ದಿನೇಶ ಹೆಗ್ಡೆ ಮೊಳಹಳ್ಳಿ, ಗಣೇಶ ಪ್ರಸಾದ ಕಾಂಚನ್‌, ಭಾಗವರ ರಾಘವೇಂದ್ರ ಮಯ್ಯ ಹಾಲಾಡಿ, ಜೋಗಿ ಸಮಾಜ ಸೇವಾ ಸಂಘದ ರಮೇಶ ಜೋಗಿ ಇದ್ದರು.

ಯಕ್ಷಗಾನ ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕ್‌ ಅಭಿನಂದ ನುಡಿಗಳನ್ನಾಡಿದರು.

ಇದೇ ಸಂದರ್ಭ ಮಾದೌ ನಾಗೂರು ಅವರ ಯಕ್ಷಗುರುಗಳಾದ ದಯಾನಂದ ಬಳೆಗಾರ ನಾಗೂರು, ಆರ್ಗೋಡು ಮೋಹನದಾಸ ಶೆಣೈ ಮತ್ತು ಮೊಳಹಳ್ಳ ಕೃಷ್ಣ ನಾಯಕ್‌ ಅವರಿಗೆ ಗುರುವಂದನೆ ಸಲ್ಲಿಸಲಾಯಿತು.

ಅಭಿನಂದನಾ ಸಮಿತಿ ವತಿಯಿಂದ ಯಕ್ಷಯಾನದ ರಜತ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಪ್ರಸಿದ್ಧ ಸ್ತ್ರೀ ವೇಷಧಾರಿ ಮಾಧವ ನಾಗೂರು ದಂಪತಿಗಳನ್ನು ಗೌರವಿಸಿ ನಿಧಿ ಸಮರ್ಪಿಸಲಾಯಿತು.

ಕಾರ್ಯಕ್ರಮವನ್ನು ಶಿಕ್ಷಕ ಸಂತೋಷ್ ಕುಮಾರ್ ಪಡುಕರೆ ನಿರೂಪಿಸಿ, ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಗಣೇಶ ನೆಲ್ಲಿಬೆಟ್ಟು ಸ್ವಾಗತಿಸಿ, ಕೋಟ ಅಮೃತೇಶ್ವರಿ ದೇಗುಲದ ಟ್ರಸ್ಟಿ ಚಂದ್ರ ಆಚಾರ್ ವಂದಿಸಿದರು.

ಬಡಗುತಿಟ್ಟಿನ ಹೆಸರಾಂತ ಅತಿಥಿ ಕಲಾವಿದರ ಕೂಡುವಿಕೆಯಿಂದ ಪೌರಾಣಿಕ ಯಕ್ಷಗಾನ ಪ್ರದರ್ಶನ ಮಹಾರಥಿ ಕರ್ಣ ಪ್ರದರ್ಶನಗೊಂಡಿತು.

Exit mobile version