Site icon Kundapra.com ಕುಂದಾಪ್ರ ಡಾಟ್ ಕಾಂ

ಕಾರು ನದಿಗೆ ಉರುಳಿ ತೆಕ್ಕಟ್ಟೆ ಮೂಲದ ಮಹಿಳೆ ಸಾವು, 6 ಮಂದಿ ಪ್ರಾಣಾಪಾಯದಿಂದ ಪಾರು

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಶಿವವೊಗ್ಗ ಜಿಲ್ಲೆಯ ಮಂಡಗದ್ದೆಯಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಇಲ್ಲಿನ ತೆಕ್ಕಟ್ಟೆ ಮೂಲದ ಮಹಿಳೆ ಮೃತಪಟ್ಟಿದ್ದಾರೆ.

ಆರು ಮಂದಿ ಕುಟುಂಬ ಸದಸ್ಯರು ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಶಿವವೊಗ್ಗ ಜಿಲ್ಲೆಯ ಮಂಡಗದ್ದೆಯಲ್ಲಿ ಘಟನೆ ಆದಿತ್ಯವಾರದಂದು ಬೆಳಗ್ಗೆ 11ರ ಸುಮಾರಿಗೆ ಸಂಭವಿಸಿದೆ.

ತೆಕ್ಕಟ್ಟೆಯ ಮಣಿಕಂಠ ಟ್ರಾನ್ಸ್‌ಪೋರ್ಟ್ ಮಾಲಕ ದೇವಾಡಿಗ ಶಿವಮೊಗ್ಗದಲ್ಲಿರುವ ಮಗಳ ಮನೆಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕುಟುಂಬ ಸದಸ್ಯರೊಂದಿಗೆ ತೆರಳುತ್ತಿದ್ದರು.

ಸುರಿಯುತ್ತಿದ್ದ ಭಾರೀ ಮಳೆ ಹಾಗೂ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಪಲ್ಟಿಯಾಗಿ ರಸ್ತೆ ಸಮೀಪದ ನದಿಗೆ ಉರುಳಿತು. ಕಾರು ನೀರಿನಲ್ಲಿ ಮುಳುಗುತ್ತಿದಂತೆ ಸ್ಥಳೀಯರು ಧಾವಿಸಿ ಬಂದು ರಕ್ಷಣೆಗಿಳಿದರೂ ಶಂಕರ ದೇವಾಡಿಗ ಅವರ ಪತ್ನಿ ಸವಿತಾ ದೇವಾಡಿಗ (57) ಅಸುನೀಗಿದರು.

ಶಂಕರ ದೇವಾಡಿಗ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪುತ್ರರಾದ ಅರುಣ್ ದೇವಾಡಿಗ ಹಾಗೂ ಎಂಜಿನಿಯರ್ ಅಶ್ವತ್ಥ ದೇವಾಡಿಗ, ಪುತ್ರಿ ಅಮೃತಾ, ಅಳಿಯ ಸುರೇಶ್ ದೇವಾಡಿಗ ಹಾಗೂ 2.5 ವರ್ಷದ ಅಭಿಶ್ರೇಯ್ ಅವರು ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯಿಂದ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಸವಿತಾ ಅವರಿಗೂ ಹೆಚ್ಚಿನ ಗಾಯಗಳಾಗಿಲ್ಲವಾದರೂ ಅಪಘಾತದ ಸಂದರ್ಭ ಆಗಿರುವ ಆಘಾತದಿಂದ ಸಾವು ಸಂಭವಿಸಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಈ ಬಗ್ಗೆ ಮಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರನ್ನು ಕ್ರೇನ್ ಸಹಾಯದಿಂದ ನೀರಿನಿಂದ ಹೊರತೆಗೆಯಲಾಯಿತು.

Exit mobile version