ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಪೋಲಿಸ್ ಇಲಾಖೆ ಜಿಲ್ಲೆಯಲ್ಲಿ ಸ್ಪಷ್ಠವಾಗಿ ಕಾರ್ಯನಿರ್ವಹಿಸುತ್ತಿದೆ. ಏರುತ್ತಿರುವ ಜನಸಂಖ್ಯೆ, ನಗರೀಕರಣ ಹಿನ್ನಲ್ಲೆಯಲ್ಲಿ ಠಾಣಾ ವ್ಯಾಪ್ತಿಯಲ್ಲಿ ಹೊಸ ಹೊಸ ಯೋಜನೆ ಯೋಚನೆ ಅಗತ್ಯವಾಗಿದೆ. ಈ ಹಿನ್ನಲ್ಲೆಯಲ್ಲಿ ಜಿಲ್ಲಾದ್ಯಂತ ದೃಷ್ಠಿ ಯೋಜನೆಯನ್ನು ಕರಾರುವಾಕ್ಕಾಗಿ ಅನುಷ್ಠಾನಗೊಳಿಸಲು ಚಿಂತನೆ ನಡೆಸಿದ್ದೇವೆ. ಅದಕ್ಕಾಗಿ ಸಾಲಿಗ್ರಾಮದಲ್ಲಿ ಚಾಲನೆ ನೀಡಿದ್ದೇವೆ. ಇದನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹೇಳಿದರು.
ಅವರು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಪ್ರಾಂಗಣದಲ್ಲಿ ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಜಂಬೋ ಸ್ಟಾರ್ ಸೆಕ್ಯೂರಿಟಿ ಮತ್ತು ಫೆಸಿಲಿಟಿ ಸರ್ವಿಸಸ್ ಸಾಲಿಗ್ರಾಮ ಸಂಯೋಜನೆಯೊಂದಿಗೆ ದೃಷ್ಠಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ರಕ್ಷಣಾ ವ್ಯವಸ್ಥೆಗೆ ದೃಷ್ಟಿ ಯೋಜನೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಸಲಿದೆ, ಪೋಲಿಸ್ ವ್ಯವಸ್ಥೆಯೊಂದಿಗೆ ಜಂಬೋ ಸೆಕ್ಯೂರಿಟಿ ಸಂಸ್ಥೆ ನಿಖರವಾಗಿ ಕಾರ್ಯನಿರ್ವಹಿಸಿ ಅಹಿತಕರ ಘಟನೆಗಳು ಸೇರಿದಂತೆ ಘಟನಾ ಮುಕ್ತ ಜಿಲ್ಲೆಯಾಗಿಸಲು ಸಹಕಾರಿಯಾಗಲಿದೆ ಎಂದು ಗ್ರಾಮಸ್ಥರು ಸಾರ್ವಜನಿಕರು ಕೈಜೋಡಿಸುವಂತೆ ಕರೆ ನೀಡಿದರು.
ಜಂಬೋ ಸ್ಟಾರ್ ಸೆಕ್ಯೂರಿಟಿ ಮತ್ತು ಫೆಸಿಲಿಟಿ ಸರ್ವಿಸಸ್ ಸಂಸ್ಥೆಯ ಮುಖ್ಯಸ್ಥ ವಿಜಯ ಫರ್ನಾಂಡೀಸ್ ಪ್ರಸ್ತಾವಿಕ ನುಡಿಗಳನ್ನಾಡಿದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ. ಕೆ.ಎಸ್ ಕಾರಂತ್ ಮಾತನಾಡಿ, ಈ ಯೋಜನೆ ಸಾಲಿಗ್ರಾಮಕ್ಕೆ ಒಳಿತನ್ನು ನೀಡುವುದರ ಜತೆಗೆ ಪ್ರಕರಣ ಮುಕ್ತ ಸಾಲಿಗ್ರಾಮವಾಗಿಸಲು ಸಹಕಾರಿಯಾಗಲಿದ್ದು ದೇಗುಲ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಇದೇ ವೇಳೆ ಸಾಂಕೇತಿಕ ಜಂಬೋ ಸ್ಟಾರ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸ್ಥಳೀಯ ನಿವೃತ್ತ ಯೋಧರಿಗೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹಸಿರು ನಿಶಾನೆ ನೀಡಿದರು.
ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧ್ಯಕ್ಷೆ ಸುಕನ್ಯಾ ಶೆಟ್ಟಿ ಅಧ್ಯಕ್ಷೆತೆ ವಹಿಸಿದ್ದರು. ಸಾಲಿಗ್ರಾಮ ಪಟ್ಟಣಪಂಚಾಯತ್ ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್ ಸಾಲಿಗ್ರಾಮ ಪಟ್ಟಣ ಪಂಚಾಯತ್ ಇಲ್ಲಿನ ನಿವಾಸಿಗಳು ಈ ಯೋಜನೆಗೆ ಕೈ ಜೋಡಿಸಲಿದ್ದಾರೆ ಎಂದರು.
ಜಿಲ್ಲಾ ಡಿವೈಎಸ್ಪಿ ಪ್ರಭು ಡಿ.ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚಿತ್ರಪಾಡಿ ಶಾಲಾ ದೈಹಿಕ ಶಿಕ್ಷಕ ಸತೀಶ್ಚಂದ್ರ ಶೆಟ್ಟಿ ನಿರೂಪಿಸಿ, ಸುಶ್ಮಿತಾ ಸ್ವಾಗತಿಸಿ, ರಮೇಶ್ ಮೆಂಡನ್ ವಂದಿಸಿದರು. ಕೋಟ ಠಾಣಾ ಪಿಎಸ್‌ಐ ಹಾಗೂ ಸಿಬ್ಬಂದಿವರ್ಗ ಸಹಕಾರ ನೀಡಿದರು.

