ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟದ ಮಣೂರು ಪಡುಕರೆ ನಿವಾಸಿ ಸಾಹಿತಿ, ಶಿಕ್ಷಕ, ಸಾಮಾಜಿಕ ಚಿಂತಕ ಸಂತೋಷ್ ಕುಮಾರ್ ಕೋಟ (44) ಮಂಗಳವಾರ ಕೆ.ಎಂ ಸಿ ಮಣಿಪಾಲ ಅಲ್ಲಿ ನಿಧನರಾದರು
ಆ.8ರಂದು ಮಣೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ಅಪಘಾತದಲ್ಲಿ ಸಂತೋಷ್ ಕುಮಾರ್ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತೆಜಿಸಿದ್ದಾರೆ.
ಕೋಟ ಸುತ್ತಮುತ್ತಲಿನ ಭಾಗದಲ್ಲಿ ಹಲವಾರು ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕರಾಗಿ, ನಿರೂಪಕರಗಿ ತಮ್ಮನ್ನು ಗುರುತಿಸಿಕೊಂಡು ಸಂತೋಷ್ ಮೇಷ್ಟ್ರು ಎಂದೆ ಜನಜನಿತರಾಗಿದ್ದರು.
ಕರಾವಳಿಯ ಕಡಲಕಿನಾರೆಯ ಗ್ರಾಮೀಣ ಭಾಗದಲ್ಲಿ ಇಂಡಿಕಾ ಕಲಾ ಬಳಗ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಸಾಂಸ್ಕೃತಿಕ ತೇರ ಎಳೆದ ಅವರು ಖ್ಯಾತ ಯಕ್ಷಗಾನ ಕಲಾವಿದ ಮೊಳಹಳ್ಳಿ ಹೆರಿಯ ನಾಯ್ಕ ಪ್ರಶಸ್ತಿ ಹುಟ್ಟು ಹಾಕಿದರಲ್ಲದೆ, ಯಕ್ಷಗಾನ ಕ್ಷೇತ್ರದ ಅನೇಕ ಸಾಧಕರನ್ನು ಗುರುತಿಸಿದ ಹೆಗ್ಗಳಿಕೆ ಅವರದ್ದಾಗಿದೆ.
ದಲಿತ ಸಂಘರ್ಷ ಸಮಿತಿ ಕೋಟ ,ಯಕ್ಷಕಲಾವಿದ ಕೋಟ ಸುರೇಶ್ ಅಭಿನಂದನಾ ಸಮಿತಿ, ಪ್ರಸಿದ್ಧ ಸ್ತ್ರೀವೇಷದಾರಿ ಮಾಧವ ನಾಗೂರು ಅಭಿನಂದನಾ ಸಮಿತಿಯ ಸಂಚಾಲಕರಾಗಿ, ಜಟ್ಟಿಗೇಶ್ವರ ಫ್ರೇಂಡ್ಸ್, ಕೋಟದ ಪಂಚವರ್ಣ ಯುವಕ ಮಂಡಲ, ಗಣೇಶೋತ್ಸವ ಸಮಿತಿ ಕೋಟ ಪಡುಕರೆ, ಜೈಹಿಂದ್ ಕ್ರಿಕೆಟ್ಸರ್ಸ್, ಕೋಟ ಪಡುಕರೆ ನಾಗರೀಕ ಹಿತರಕ್ಷಣಾ ಸಮಿತಿ ಸೇರಿದಂತೆ ಅನೇಕ ಸಂಘಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಕೊಲ್ಲೂರು ಸಮೀಪದ ನಿಟ್ಟೂರಿನ ಹಳ್ಳಿಗಾಡಿನ ಶಾಲೆಯೊಂದರಲ್ಲಿ ಕಾರ್ಯನಿರ್ವಹಿಸಿ ಸರಕಾರಿ ಶಾಲೆಯ ಏಳಿಗೆಗೆ ಶ್ರಮಿಸಿದ್ದಾರೆ, ಇತ್ತೀಚಿಗೆ ಕುಂದಾಪುರದ ಯಡಾಡಿ ಮತ್ಯಾಡಿ ಸುಜ್ಞಾನ ಎಜುಕೇಶನ್ ಟ್ರಸ್ಟ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯಿಕ ಕ್ಷೇತ್ರದಲ್ಲಿ ತನ್ನದೆ ಆದ ಕೊಡುಗೆಗಳನ್ನು ನೀಡಿದ ಅವರು ಅಭಿನಯ ಹಾಗೂ ಅಲೆಗಳು ಸೇರಿದಂತೆ ಹಲವು ಕಾದಂಬರಿ ಮತ್ತು ಕವನ ಸಂಕಲನ ಬರೆದು ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರಲ್ಲದೆ 2012ರಲ್ಲಿ ಕರ್ನಾಟಕ ಸರಕಾರದ ಜಿಲ್ಲಾ ಯುವ ಸಾಹಿತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳು ಗುರುತಿಸಿ ಗೌರವಿಸಿದೆ .
ಪತ್ನಿ, ಒಂದು ತಿಂಗಳ ಪುತ್ರಿ ಮತ್ತು ಸಹೋದರರನ್ನು ಅಗಲಿದ್ದಾರೆ. ಅವರ ಅಗಲುವಿಕೆಗೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ. ಅಲ್ಲದೆ ಬುಧವಾರ ಸ್ವಗೃಹದಲ್ಲಿ ಅಂತ್ಯಸಂಸ್ಕಾರ ನಡೆಲಿದೆ.

