ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕೋಟದ ಹಂದಟ್ಟು ಗೆಳೆಯರ ಬಳಗ ಯುವಕ ಸಂಘ ದಾನಗುಂದು ಇವರ ವತಿಯಿಂದ 25ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಹಂದಟ್ಟು ಚೌತಿ ಸಾಮರಸ್ಯದ ಸಮಾಗಮ ವೈಭವದಿಂದ ಐದು ದಿನಗಳ ಕಾಲ ನಡೆಯುತ್ತಿದ್ದು ಶನಿವಾರ ದಾನಗುಂದು ಬಳಗದ ಸಭಾಂಗಣದಲ್ಲಿ ಸಹಸ್ರ ನಾರಿಕೇಳ ಗಣಯಾಗ ಧಾರ್ಮಿಕ ವಿಧಿವಿಧಾನಗಳೊಂದಿಗೆ ಸಂಪನ್ನಗೊಂಡಿತು.
ಪೌರೋಹಿತ್ಯರಾದ ಅಕ್ಷಯ ಹಂದೆ ಪಡುಕರೆ ನೇತೃತ್ವದಲ್ಲಿ ನಡೆದ ಹೋಮಾಧಿ ಕಾರ್ಯಕ್ರಮಗಳು ಕೋಟ ಅಮೃತೇಶ್ವರೀ ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಸಮ್ಮುಖದಲ್ಲಿ ಪೂರ್ಣಾಹುತಿಗೊಂಡಿತು.
ಅಪರಾಹ್ನ ಮಹಾಗಣಪನಿಗೆ ಮಹಾಪೂಜೆ,ಮಹಾಅನ್ನಸಂತರ್ಪಣೆ, ಶ್ರೀ ಭಗವತ್ ಭಜನಾ ಮಂಡಳಿ ಪಡುಕರೆ, ಪಂಚವರ್ಣ ಮಹಿಳಾ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಸಂಜೆ ಕಲಾಧರ ಯಕ್ಷಬಳಗ ಜಲವಳ್ಳಿ ಅವರಿಂದ ಅಮೃತ ಕಲಶ ಶ್ರೀ ಕೃಷ್ಣ ಪಾರಿಜಾತ ಸಂಪನ್ನಗೊಂಡಿತು.
ಗೆಳೆಯರ ಬಳಗದ ಅಧ್ಯಕ್ಷ ಪ್ರಕಾಶ್ ಹಂದಟ್ಟು, ಪ್ರಧಾನ ಕಾರ್ಯದರ್ಶಿ ನಿತೇಶ್, ಸುದರ್ಶನ್, ಕೋಶಾಧಿಕಾರಿ ಅಭಿಷೇಕ ಶ್ರೀಯಾನ್, ಪ್ರಮುಖರಾದ ಗೋವಿಂದ ಪೂಜಾರಿ, ಜಯಪ್ರಕಾಶ್, ಮಂಜುನಾಥ್ ಪೂಜಾರಿ, ರಾಜು ಪೂಜಾರಿ ಮತ್ತಿತರರು ಇದ್ದರು.

