Site icon Kundapra.com ಕುಂದಾಪ್ರ ಡಾಟ್ ಕಾಂ

ತಾಂತ್ರಿಕ ಸಮಸ್ಯೆಯಿಂದ ದಡಕ್ಕಪ್ಪಳಿಸಿದ ಬೋಟ್: ಐವರು ಪಾರು, ಲಕ್ಷಾಂತರ ರೂ. ನಷ್ಟ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ:
ತಾಂತ್ರಿಕ ಸಮಸ್ಯೆಯಿಂದಾಗಿ ಬೋಟ್ ದಡಕ್ಕೆ ಅಪ್ಪಳಿಸಿ ಜಖಂಗೊಂಡಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ ಘಟನೆ ಬ್ರಹ್ಮಾವರ ತಾಲೂಕಿನ ಹಂಗಾರಕಟ್ಟೆ ಬಳಿ ಸಂಭವಿಸಿದೆ.

ಸೆಪ್ಟೆಂಬರ್ 17ರಂದು ಬೆಳಗ್ಗೆ ಕೋಡಿ ಬೆಂಗ್ರೆ ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿತ್ತು. ಮಧ್ಯಾಹ್ನ ಹಂಗಾರಕಟ್ಟೆ ಬಂದರು ಬಳಿ ಮೀನುಗಾರಿಕೆ ನಡೆಸುತ್ತಿದ್ದಾಗ ಬೋಟ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಇಂಜಿನ್ ಸ್ಥಗಿತಗೊಂಡಿದೆ. ಎಷ್ಟೇ ಪ್ರಯತ್ನಿಸಿದರೂ ಇಂಜಿನ್ ಪುನಃ ಆರಂಭಗೊಂಡಿಲ್ಲ. ಈ ನಡುವೆ, ಬಿರುಗಾಳಿ ಮತ್ತು ಅಲೆಗಳ ರಭಸಕ್ಕೆ ಬೋಟ್ ಸಮುದ್ರ ತೀರಕ್ಕೆ ಬಂದು ಕೋಡಿ ಕನ್ಯಾನ ಗ್ರಾಮದ ಕೋಡಿ ಬಳಿ ದಡಕ್ಕೆ ಅಪ್ಪಳಿಸಿತು.

ಬೋಟ್‌ನಲ್ಲಿದ್ದ ಐವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಬೋಟ್ ಮತ್ತು ಅದರಲ್ಲಿದ್ದ ಇತರೆ ಸಾಮಾಗ್ರಿಗಳು ಹಾನಿಗೊಳಗಾಗಿದ್ದು, ಸುಮಾರು 10 ಲಕ್ಷ ರೂ.ಗೂ ಹೆಚ್ಚು ನಷ್ಟವಾಗಿರುವುದಾಗಿ ಅಂದಾಜಿಸಲಾಗಿದೆ. ಕೋಡಿಬೆಂಗ್ರೆ ನಿವಾಸಿ ಮಹೇಶ್ ಎಂಬುವರಿಗೆ ಸೇರಿದ ‘ಮಹಾಕಾಳಿ’ ಎಂಬ ಹೆಸರಿನ ಬೋಟ್ ಇದಾಗಿದೆ.

ಈ ಘಟನೆ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version