ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶಾಲೆ, ಕಾಲೇಜು ಬಸ್ಸಿಗೆ ಹೊಸ ವಿಮೆ ಪಾಲಿಸಿ ಮಾಡಿಸುವುದಾಗಿ ಹಣ ಪಡೆದು ನಕಲಿ ವಿಮೆ ಮಾಡಿಸಿ ವಂಚಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಕೋಟ ಪೋಲೀಸರು ಬಂಧಿಸಿದ್ದಾರೆ. ಬ್ರಹ್ಮಾವರ ತಾಲೂಕಿನ ಪಾಂಡೇಶ್ವರ ಗ್ರಾಮದ ರಾಕೇಶ ಎಸ್., ಹಾಗೂ ಚರಣ ಬಾಬು ಮೇಸ್ತ ಬಂಧಿತ ಆರೋಪಿಗಳು.
ಘಟನೆಯ ವಿವರ:
ಕುಂದಾಪುರ ತಾಲೂಕಿನ ಹೊಂಬಾಡಿ – ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ ಶಾಲಾ ವಾಹನ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಕೋಟ ಪೊಲೀಸ್ ಠಾಣೆಯಲ್ಲಿ ಬಿಎನ್ ಎಸ್ ರಂತೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣವು ಕುಂದಾಪುರ ಸೆಷನ್ಸ್ ನ್ಯಾಯಾಲಯದ ವಿಚಾರಣೆಯಲ್ಲಿದ್ದು ರಿಕ್ಷಾದ ಚಾಲಕರಾದ ಉದಯ ಶೆಟ್ಟಿ ಎಂಬುವರು ವಿಮಾ ಪರಿಹಾರವಾಗಿ ರೂ, 15,95,000/- ಕೋರಿಕೊಂಡಿರುತ್ತಾರೆ. ಸದ್ರಿ ಪ್ರಕರಣವನ್ನು ವಿಮಾ ಕಂಪೆನಿಯವರು ಪರಿಶೀಲಿಸಲಾಗಿ ಶಾಲಾ ಬಸ್ಸಿನ ವಿಮಾ ಪಾಲಿಸಿಯು ನಕಲಿ ವಿಮಾ ಪಾಲಿಸಿಯಾಗಿರುವುದು ಕಂಡುಬಂದಿರುತ್ತದೆ. ಆರೋಪಿಯು ನಕಲಿ ವಿಮಾ ಪಾಲಿಸಿಯನ್ನು ಸೃಷ್ಟಿಸಿ ಠಾಣೆಗೆ ಹಾಗೂ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಈ ಮೂಲಕ ವಿಮಾ ಕಂಪೆನಿಗೆ ಮೋಸ ಮಾಡಿರುತ್ತಾರೆ ಎಂಬುದಾಗಿ ರಿಲಯನ್ಸ್ ಜನರಲ್ ಇನ್ಯೂರೆನ್ಸ್ ಕಂಪೆನಿಯ ಮೇನೇಜರ್ ನಿಖಿಲ್ ಜಿ.ಆರ್ ರವರು ಅ.04ರಂದು ದೂರು ನೀಡಿದ್ದರು.
ಆರೋಪಿಗಳ ಪತ್ತೆಯ ಬಗ್ಗೆ ಬ್ರಹ್ಮಾವರ ಸಿ.ಪಿ.ಐ ಗೋಪಿ ಕೃಷ್ಣ ನೇತೃತ್ವದಲ್ಲಿ ಕೋಟ ಪೊಲೀಸ್ ಠಾಣೆಯ ಪಿಎಸ್‌ಐ ಪ್ರವೀಣ ಕುಮಾರ್ ಆರ್ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತನಿಖಾ ತಂಡವು ಸೆ.06ರಂದು ಪ್ರಕರಣದ ಆರೋಪಿತನಾದ ರಾಕೇಶ ಎಸ್ (33) ಎಂಬವನನ್ನು ದಸ್ತಗಿರಿ ಮಾಡಿದ್ದರು. ವಿಚಾರಣೆ ಸಮಯದಲ್ಲಿ ಆರೋಪಿತನು ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ ಕಂಪೆನಿಯಲ್ಲಿ ಎಸ್ಡಿಓ ಆಗಿದ್ದ ಚರಣ ಬಾಬು ಮೇಸ್ತ ಎಂಬವನ ಜೊತೆ ಸೇರಿಕೊಂಡು ಕುಂದಾಪುರ, ಕೋಟ, ಬ್ರಹ್ಮಾವರ, ಶಿರೂರು, ಭಟ್ಕಳ ಸ್ಥಳಗಳಲ್ಲಿ ಶಾಲೆ ಹಾಗೂ ಕಾಲೇಜಿನ ಬಸ್ಸಿಗೆ ವಿಮೆ ಪಾಲಿಸಿ ಮಾಡುವುದಾಗಿ ನಂಬಿಸಿ ನಕಲಿ ವಿಮೆ ಪಾಲಿಸಿಯನ್ನು ಮಾಡಿ ಶಾಲೆಯವರಲ್ಲಿ ಅಸಲಿ ವಿಮೆ ಪಾಲಿಸಿ ಎಂದು ನಂಬಿಸಿ ಮೋಸ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿರುತ್ತಾನೆ.
ಪ್ರಕರಣದ 2 ನೇ ಆರೋಪಿತ ಚರಣ ಬಾಬು ಮೇಸ್ತ ಎಂಬವನನ್ನು ಅ.03ರಂದು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೆಚ್ಚಿನ ತನಿಖೆ ಬಗ್ಗೆ ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿ ಆರೋಪಿಗಳು ಭಟ್ಕಳ ಹಾಗೂ ಉಡುಪಿ ಕಡೆಗಳಲ್ಲಿಯ ಖಾಸಗಿ/ಅನುದಾನಿತ ಶಾಲಾ ಕಾಲೇಜಿನಲ್ಲಿ ಶಾಲಾ ಬಸ್ಸಿನ ವಿಮೆ ಮಾಡಿಸುವುದಾಗಿ ಹಣ ಪಡೆದು ಇದೇ ರೀತಿಯ ಕೃತ್ಯವೆಸಗಿರುವುದು ತಿಳಿದು ಬಂದಿರುತ್ತದೆ.
ಆರೋಪಿತರು ಈಗಾಗಲೇ ರಿಲಾಯನ್ಸ್ ಜನರಲ್ ಇನ್ಸೂರೆನ್ಸ್ ಕಂಪೆನಿಯಲ್ಲಿ ಈ ಹಿಂದೆ ಕೆಲಸ ಮಾಡಿದವರಾಗಿದ್ದು, ಹಳೆ ಪಾಲಿಸಿಗಳನ್ನು PDF ಪೈಲ್ ಮಾಡಿ ಕಂಪ್ಯೂಟರನಲ್ಲಿ ಸಂಗ್ರಹಿಸಿ PDF Editor App ಮೂಲಕ ವಿಮೆ ಪಾಲಿಸಿಯಲ್ಲಿ ವಿಮೆ ನಂಬ್ರ, ದಿನಾಂಕ, ವಾಹನದ ನಂಬ್ರ ಮತ್ತು ವಿಮೆ ಮೊತ್ತದ ಹಣವನ್ನು ತಮಗೆ ಬೇಕಾದ ರೀತಿಯಲ್ಲಿ ಎಡಿಟ್ ಮಾಡಿ ವಿಮೆ ಪಾಲಿಸಿ ಮಾಡಲು ನೀಡಿದ ಶಾಲಾ /ಕಾಲೇಜಿಗೆ ಕಳುಹಿಸಿರುವುದು ತಿಳಿದು ಬಂದಿರುತ್ತದೆ.
ಇದೇ ರೀತಿಯಾಗಿ ಉತ್ತರ ಕನ್ನಡ ಜಿಲ್ಲೆ ಭಟ್ಕಳ, ಉಡುಪಿ ಜಿಲ್ಲೆಯ ಕುಂದಾಪುರ, ಕೋಟ ಠಾಣಾ ವ್ಯಾಪ್ತಿಯಲ್ಲಿರುವ ಶಾಲೆ / ಕಾಲೇಜಿನ ಶಾಲಾ ಬಸ್ಸಿಗೆ ವಿಮೆ ಮಾಡಿಸುವುದಾಗಿ ಆರೋಪಿ 1 ಮತ್ತು 2ನೇಯವರು ಸೇರಿ ಸುಮಾರು 86 ಪಾಲಿಸಿಗಳಲ್ಲಿ 29 ಪಾಲಿಸಿ ನಕಲಿ ಹಾಗೂ 2ನೇ ಆರೋಪಿತ ಒಬ್ಬನೇ 111 ಪಾಲಿಸಿಯಲ್ಲಿ 17 ನಕಲಿ ಪಾಲಿಸಿ ಮಾಡಿ ಒಟ್ಟು 46 ಶಾಲೆ/ಕಾಲೇಜು ವಾಹನಗಳ ವಿಮೆಯನ್ನು ನಕಲಿ ಮಾಡಿರುವುದು ತನಿಖೆ ವೇಳೆ ತಿಳಿದು ಬಂದಿರುತ್ತದೆ.

