ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಲೆ, ಸಂಗೀತ, ಭರತನಾಟ್ಯ, ಯಕ್ಷಗಾನದಂತಹ ಕ್ಷೇತ್ರ ಕಲೆಗಳು ಸಂಸ್ಕಾರ ನೀಡುವುದರೊಂದಿಗೆ ನಮ್ಮ ಸಂಸ್ಕ್ರತಿಯನ್ನು ತಿಳಿಸಿಕೊಡುತ್ತದೆ ಎಂದು ಎಡನೀರು ಮಠದ ಮಠಾಧೀಶ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಅವರು ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಹಂಗಾರಕಟ್ಟೆ ಐರೋಡಿಯ ಯಕ್ಷಗಾನ ಕಲಾಕೇಂದ್ರದ ವತಿಯಿಂದ ನಡೆಯುತ್ತಿರುವ ನಾಲ್ಕನೇ ವರ್ಷದ ಯಕ್ಷಗಾನ ಸಪ್ತೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರೇಕ್ಷಕರನ್ನು ಸೆಳೆಯುವ ಪ್ರಯತ್ನ ಮತ್ತು ವಾಣಿಜ್ಯಕರಣದಿಂದ ಯಕ್ಷಗಾನ ಕಲೆಯ ಮೂಲ ಸ್ವರೂಪ ಮರೆಯಾಗುತ್ತಿದೆ. ಯಕ್ಷಗಾನ ಕಲಾಕೇಂದ್ರಗಳ ಮೂಲಕ ಯಕ್ಷಗಾನ ಕಲೆಯ ಮೂಲ ಸ್ವರೂಪ ಉಳಿದುಕೊಂಡಿರುವುದು ಶ್ಲಾಘನೀಯ ಎಂದರು.
ಅನುಸರಣೆ, ಅನುಕರಣೆ ಮಾಡುವ ಎರಡು ಬಗೆಯ ಕಲಾವಿದರನ್ನು ನಾವು ಕಾಣುತ್ತಿದ್ದೇವೆ. ಇದರಲ್ಲಿ ಗುರುವಿನ ಮೂಲಕ ಅನುಕರಣೆ ಮಾಡಿ ಕಲಿತ ಕಲಾವಿದರು ಶಾಶ್ವತರಾಗಿರುತ್ತಾರೆ ಎಂದ ಅವರು ಕರಾವಳಿಯ ಜನತೆ ಯಕ್ಷಗಾನದ ಮೂಲಕ ಸಂಸ್ಕಾರವಂತರಾಗಿದ್ದಾರೆ. ಇಂತಹ ಸಂಸ್ಕಾರ ನೀಡುವ ಕಲೆಯನ್ನು ಉಳಿಸಿ ಪ್ರೋತ್ಸಾಹಿಸಬೇಕು ಅಲ್ಲದೇ ಎಲ್ಲ ಕಡೆ ಇಂತಹ ಕಲಾಕೇಂದ್ರಗಳು ಹುಟ್ಟಿಕೊಳ್ಳಬೇಕು ಎಂದು ಹೇಳಿದರು.
ಕಲಾಕೇಂದ್ರದ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿದ್ದರು.
ಕರ್ಣಾಟಕ ಬ್ಯಾಂಕ್‌ನ ಚೀಫ್ ಮ್ಯಾನೇಜರ್ ಜಯಾನಂದ ದೇವಾಡಿಗ, ಸೆಲ್ಕೋ ಸೋಲಾರ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೋಹನ ಹೆಗಡೆ, ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಅಧ್ಯಕ್ಷ ಡಾ. ಕೆ.ಎಸ್ ಕಾರಂತ, ನಿಕಟಪೂರ್ವ ಅಧ್ಯಕ್ಷ ಅನಂತ ಪದ್ಮನಾಭ ಐತಾಳ ಇದ್ದರು.
ಕಲಾಕೇಂದ್ರದ ಕಾರ್ಯದರ್ಶಿ ರಾಜಶೇಖರ ಹೆಬ್ಬಾರ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಸೀತಾರಾಮ ಸೋಮಯಾಜಿ ನಿರೂಪಿಸಿದರು. ವೈಕುಂಠ ಹೇರ್ಳೆ ವಂದಿಸಿದರು. ನಂತರ ಚಿತ್ರಾಕ್ಷಿ ಕಲ್ಯಾಣ ಯಕ್ಷಗಾನ ಪ್ರದರ್ಶನ ನಡೆಯಿತು.

