Kundapra.com ಕುಂದಾಪ್ರ ಡಾಟ್ ಕಾಂ

ಪೌಷ್ಟಿಕಾಹಾರ ಸಮತೋಲನಕ್ಕೆ ಪೋಷಣ್ ಯೋಜನೆ ಸಹಕಾರಿ: ಅನುರಾಧ ಹಾದಿಮನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ
: ಗರ್ಭಿಣಿಯರು ಸೇರಿದಂತೆ ಮಕ್ಕಳ ಪೌಷ್ಟಿಕಾಹಾರ ಸಮತೋಲನಕ್ಕಾಗಿ ಪ್ರಧಾನಮಂತ್ರಿಗಳು ಪೋಷಣ್ ಅಭಿಯಾನವನ್ನು ಅನುಷ್ಠಾನಗೊಳಿಸಿ ನಿರಂತರವಾಗಿ ಜನರಿಗೆ ತಲುಪಿದಾಗ ಯಶಸ್ಸು ಕಾಣಲು ಸಾಧ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಇಲಾಖೆ ಉಡುಪಿ ಜಿಲ್ಲಾ ನಿರೂಪಣಾಧಿಕಾರಿ ಅನುರಾಧ ಹಾದಿಮನಿ ಹೇಳಿದರು.

ಅವರು ಗುರುವಾರ ಸಾಲಿಗ್ರಾಮ ಪಟ್ಟಣಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ಜಿಲ್ಲೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಉಡುಪಿ ಜಿಲ್ಲೆ ನರು ಅಭಿವೃದ್ಧಿ ಯೋಜನೆ ಬ್ರಹ್ಮಾವರ, ಸಾಲಿಗ್ರಾಮಪ್ರಾಥಮಿಕ ಆರೋಗ್ಯ ಕೇಂದ್ರ, ಸಾಲಿಗ್ರಾಮ ಪಟ್ಟಣ ಪಂಚಾಯತ್ ಇವರ ಸಹಯೋಗದೊಂದಿಗೆ ಪೋಷಣ್ ಅಭಿಯಾನ, ಪೋಷಣ್ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪರಿಸರಕ್ಕೆ ಪೂರಕವಾದ ವಾತಾವರಣ ಸೃಷ್ಠಿಸಲು ಸಲುವಾಗಿ ತಾಯಿ ಹೆಸರಿನಲ್ಲಿ ಗಿಡ ನಡುವ ಸಂಕಲ್ಪಕ್ಕೆ ಕರೆ ನೀಡಿ ಗ್ರಾಮಗ್ರಾಮದಲ್ಲಿ ಪೋಷಣ್ ಯೋಜನೆ ಪರಿಣಾಮಕಾರಿಯಾಗಿ ಕಾರ್ಯಾಚರಿಸುತ್ತಿದೆ ಇದರ ಪ್ರಯೋಜನ ಪಡೆಯುವಂತೆ ತಾಯಂದಿರರಿಗೆ ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಾಲಿಗ್ರಾಮ ಪಟ್ಟಣಪಂಚಾಯತ್ ಅಧ್ಯಕ್ಷೆ ಸುಕನ್ಯಾ ಜೆ. ಶೆಟ್ಟಿ ವಹಿಸಿದ್ದರು.

ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ಪಟ್ಟಣಪಂಚಾಯತ್ ಉಪಾಧ್ಯಕ್ಷೆ ಗಿರಿಜಾ ಪೂಜಾರಿ, ಸದಸ್ಯರಾದ ಶ್ರೀನಿವಾಸ ಅಮೀನ್, ಸಂಜೀವ ದೇವಾಡಿಗ, ಸುಮಲತಾ ಹೆಗ್ಡೆ, ರಾಜು ಪೂಜಾರಿ, ಅನುಸೂಯ ಹೇರ್ಳೆ, ಮುಖ್ಯಾಧಿಕಾರಿ ಅಜೇಯ್ ಭಂಡಾರ್ಕರ್, ಸಾಲಿಗ್ರಾಮ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಜಯಶೀಲ ಆಚಾರ್ ಸೇರಿದಂತೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಇಲಾಖೆಯ ಹಿರಿಯ ಮೇಲ್ವಿಚಾರಕಿ ಭಾಗೀರಥಿ ಆಚಾರ್ಯ ಸ್ವಾಗತಿಸಿ, ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಶಾಲಿನಿ ವಂದಿಸಿದರು.

ಪೋಷಣ್ ಅಭಿಯಾನದಲ್ಲಿ ಒಂಭತ್ತು ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ, ಆರು ತಿಂಗಳು ತುಂಬಿದ ಮೂರು ಮಕ್ಕಳಿಗೆ ಅನ್ನಪ್ರಾಶನ, ಧಾನ್ಯದ ಕಾಳುಗಳು ರಂಗೋಲಿ ಪುಡಿಯ ಮೂಲಕ ಪರಿಸರಸ್ನೇಹಿ ಚಿತ್ರಗಳು, ಅಲ್ಲದೆ ಸೊಪ್ಪು ತರಕಾರಿಗಳು ವಿವಿಧ ಆಕೃತಿಗಳು ಗಮನ ಸೆಳೆಯಿತು.

Exit mobile version