ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಯಕ್ಷಗಾನ ಕ್ಷೇತ್ರಕ್ಕೆ ಸುಬ್ರಹ್ಮಣ್ಯ ಧಾರೇಶ್ವರರ ಕೊಡುಗೆ ಅಪಾರವಾದ್ದು ಅಂತಹ ಮಹಾನ್ ಚೇತನರ ಹೆಸರನ್ನು ಚಿರಸ್ಥಾಯಿಯಾಗಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಯಕ್ಷಪ್ರೋತ್ಸಾಹ ಪಾರಂಪಳ್ಳಿ ರವೀಂದ್ರ ಐತಾಳ್ ನುಡಿದರು.
ಅವರು ಗುಂಡ್ಮಿ ಯಕ್ಷಗಾನ ಕಲಾಕೇಂದ್ರ ಐರೋಡಿ ಹಂಗಾರಕಟ್ಟೆಯಲ್ಲಿ ಒಂದು ವಾರಗಳ ಕಾಲ ನಡೆಯುತ್ತಿರುವ ಯಕ್ಷಸಪ್ತೋತ್ಸವ ಆರನೇ ದಿನದ ಭಾಗವತ ದಿ. ಸುಬ್ರಹ್ಮಣ್ಯ ಧಾರೇಶ್ವರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಸ್ಮರಣಾ ನುಡಿಗಳನ್ನಾಡಿದರು.
ಧಾರೇಶ್ವರರಂತಹ ಮಹಾನ್ ಕಲಾವಿದರು ಬಡಗುತಿಟ್ಟನ್ನು ಶ್ರೀಮಂತವಾಗಿಸಿದ್ದಾರೆ, ಕಲಾವಿದರಿಗೆ ಚೈತನ್ಯ ತುಂಬುವುದರ ಜತೆಗೆ ಯಕ್ಷಗಾನದ ಪಾರಂಪರಿಕ ಸೊಗಡನ್ನು ಶ್ರೇಷ್ಠವಾಗಿಸಿದ್ದಾರೆ. ಇಂತಹ ಮಹಾನ್ ಯಕ್ಷಕಲಾವಿದರ ಹೆಸರನ್ನು ಕಲಾಕೇಂದ್ರದ ಮೂಲಕ ಉಳಿಸಿ ಬೆಳೆಸವಂತೆ ಮಾಡಿದ್ದಾರೆ ಎಂದರು.

ಇದೇ ವೇಳೆ ತೆಂಕು ತಿಟ್ಟಿನ ಭಾಗವತ ಪೆರ್ಲ ಸತ್ಯನಾರಾಯಣ ಪುಣೆಂಚಿತ್ತಾಯ ಅವರಿಗೆ ಸುಬ್ರಹ್ಮಣ್ಯ ಧಾರೇಶ್ವರ ಪ್ರಶಸ್ತಿ ಪ್ರದಾನಿಸಲಾಯಿತು. ಪತ್ರಕರ್ತ ರವೀಂದ್ರ ಕೋಟ ಅಭಿನಂದನಾ ನುಡಿಗಳನ್ನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಕಲಾಕೇಂದ್ರದ ಯಕ್ಷಗುರು ಸದಾನಂದ ಐತಾಳ್ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಅಜಪುರ ಕರ್ನಾಟಕ ಯಕ್ಷಗಾನ ಸಂಘದ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಗೀತಾ ಫೌಂಡೇಶನ್ ಮುಖ್ಯಸ್ಥ ಶಂಕರ್ ಐತಾಳ್ ಯಕ್ಷವಿಮರ್ಷಕ ಆನಂದರಾಮ ಉಪಾಧ್ಯಾಯ, ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪೂರ್ಣಿಮಾ ಉಪಸ್ಥಿತರಿದ್ದರು.
ಕಲಾಕೇಂದ್ರದ ಕಾರ್ಯದರ್ಶಿ ಐರೋಡಿ ರಾಜಶೇಖರ್ ಹೆಬ್ಬಾರ್ ಸ್ವಾಗತಿಸಿ, ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಸುಮನ ಹೇರ್ಳೆ ನಿರೂಪಿಸಿದರು. ರಾಮಚಂದ್ರ ಐತಾಳ್ ವಂದಿಸಿದರು. ಸೀತಾರಾಮ ಸೋಮಯಾಜಿ ಸಹಕರಿಸಿದರು. ಪ್ರಸಿದ್ಧ ಕಲಾವಿದರಿಂದ ತಾಮ್ರಧ್ವಜ ಕಾಳಗ ಪ್ರದರ್ಶನ ಜರಗಿತು.