ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ತಲಾಂತರಗಳಿಂದ ಬಳುವಳಿಯಾಗಿ ಬಂದ ರೈತ ಕಾಯಕ ಮುಂದೊಂದು ದಿನ ದೊಡ್ಡ ಆಸ್ತಿಯಾಗಿ ಹೊರಹೊಮ್ಮಲ್ಲಿದೆ ಎಂದು ಕೆ.ಎಂ ಎಫ್ ನಿರ್ದೇಶಕ ಕೆ. ಶಿವಮೂರ್ತಿ ಉಪಾಧ್ಯಾ ಹೇಳಿದರು.
ಅವರು ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ , ಪಂಚವರ್ಣ ಮಹಿಳಾ ಮಂಡಲ ಇದರ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಗೆಳೆಯರ ಬಳಗ ಕಾರ್ಕಡ, ಸ್ನೇಹಕೂಟ ಮಣೂರು, ರೋಟರಿ ಕ್ಲಬ್ ಕೋಟ ಸಾಲಿಗ್ರಾಮ, ರೈತಧ್ವನಿ ಸಂಘ ಕೋಟ ಇವರ ಸಹಯೋಗದೊಂದಿಗೆ 49ನೇ ರೈತರೆಡೆಗೆ ನಮ್ಮ ನಡಿಗೆ ಸರಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಯುವ ಸಮುದಾಯ ಕೃಷಿ ಕಾಯಕದಲ್ಲಿ ಮಂಚೂಣಿಗೆ ನಿಲ್ಲಬೇಕು, ಸರಕಾರ ಕೃಷಿ ಕಾರ್ಯ ಉಳಿಯಲು ವಿವಿಧ ಯೋಜನೆಗಳನ್ನು ರೂಪಿಸಬೇಕು. ಪ್ರಸ್ತುತ ಭತ್ತದ ಬೆಳೆಗೆ ನೈಜ ಬೆಲೆ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಿದರಲ್ಲದೆ ಕೃಷಿಕರನ್ನು ಗುರುತಿಸುವ ಪಂಚವರ್ಣದ ಕಾರ್ಯ ಅತ್ಯಂತ ಶ್ರೇಷ್ಠತೆಯನ್ನು ಪಡೆದುಕೊಂಡಿದೆ ಎಂದರು.
ರೈತಧ್ವನಿ ಸಂಘ ಕೋಟ ಅಧ್ಯಕ್ಷ ಎಂ. ಜಯರಾಮ ಶೆಟ್ಟಿ ಮಾತನಾಡಿ, ಕೃಷಿ ಕಾರ್ಯದಲ್ಲಿ ಸಮಗ್ರ ಕೃಷಿ ಪದ್ದತಿಯನ್ನು ಅನುಸರಿಸಬೇಕು. ಆಗ ಮಾತ್ರ ಲಾಭದಾಯಕ ಕೃಷಿಯಾಗಿಸಲು ಸಾಧ್ಯ ಎಂದರು. 49ನೇ ಸಾಧಕ ರೈತ ಪುರಸ್ಕಾರವನ್ನು ಪ್ರಗತಿಪರ ಕೃಷಿಕ ಪಾರಂಪಳ್ಳಿ ರವೀಂದ್ರ ಐತಾಳ್, ಪಾರಂಪಳ್ಳಿ ಸುರೇಶ್ ಉಪಾಧ್ಯಾ ಅವರಿಗೆ ಪ್ರದಾನಿಸಿದರು.
ಕಾರ್ಯಕ್ರಮವನ್ನು ಗ್ರಾಮದ ಹಿರಿಯರಾದ ಶ್ರೀಧರ ಉಪಾಧ್ಯಾ ಉದ್ಘಾಟಿಸಿದರು. ರೈತ ಪುರಸ್ಕೃತ ಸುರೇಶ್ ಉಪಾಧ್ಯಾ ದಂಪತಿಗಳು ಗೋ ಪೂಜೆ ನೆರವೆರಿಸಿ, ಗಿಡ ನೆಟ್ಟು ಪರಿಸರ ಜಾಗೃತಿ ಮೆರೆದರು. ಸಭೆಯ ಅಧ್ಯಕ್ಷತೆಯನ್ನು ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ ವಹಿಸಿದ್ದರು.
ಉಡುಪಿ ಕೃಷಿ ಇಲಾಖೆಯ ಯೋಜನಾ ನಿರ್ದೇಶಕ ಡಾ. ರಾಜೇಶ್ ಕೃಷಿ ಬಗ್ಗೆ ಮಾಹಿತಿ ನೀಡಿದರು. ಮುಖ್ಯ ಅಭ್ಯಾಗತರಾಗಿ ಕೃಷಿಕರಾದ ಪಾರಂಪಳ್ಳಿ ರಘು ಮಧ್ಯಸ್ಥ , ವಿನ್ ಲೈಟ್ ಸ್ಪೋಟ್ಸ್೯ ಕ್ಲಬ್ ಪಾರಂಪಳ್ಳಿ ಗೌರವಾಧ್ಯಕ್ಷ ರಾಜೇಶ್ ಉಪಾಧ್ಯಾ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಸ್ನೇಹಕೂಟ ಮಣೂರು ಸಂಚಾಲಕಿ ಭಾರತಿ ವಿ. ಮಯ್ಯ,ರೋಟರಿ ಕ್ಲಬ್ ಕೋಟ ಸಾಲಿಗ್ರಾಮ ಕಾರ್ಯದರ್ಶಿ ಶರಣಯ್ಯ ಹಿರೇಮಠ, ಪಂಚವರ್ಣ ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಪಂಚವರ್ಣ ಯುವಕ ಮಂಡಲದ ಸದಸ್ಯ ಕೇಶವ ಆಚಾರ್ ಸ್ವಾಗತಿಸಿದರು. ಪಂಚವರ್ಣ ಮಹಿಳಾ ಮಂಡಲದ ಉಪಾಧ್ಯಕ್ಷೆ ಪುಷ್ಭಾ ಕೆ. ಹಂದಟ್ಟು ಸನ್ಮಾನ ಪತ್ರ ವಾಚಿಸಿ, ಮಹಿಳಾ ಮಂಡಲದ ಸಂಚಾಲಕಿ ಸುಜಾತ ಎಂ. ಬಾಯರಿ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮವನ್ನು ಸಲಹಾ ಸಮಿತಿಯ ರವೀಂದ್ರ ಕೋಟ ಸಂಯೋಜಿಸಿದರು.