Site icon Kundapra.com ಕುಂದಾಪ್ರ ಡಾಟ್ ಕಾಂ

ಇಂದಿನ ಯುವಜನರು ಹೆಚ್ಚು ಸಾಹಿತ್ಯ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಿ: ಡಾ. ರಾಜೇಂದ್ರ ಎಸ್. ನಾಯಕ್‌

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಇಂದಿನ ಕಲುಷಿತ ವಾತಾವರಣದಲ್ಲಿ ಜೀವನವನ್ನು ಸುಂದರವಾಗಿಸಬಲ್ಲ. ಪ್ರೀತಿಗೆ, ಬದಲಾಗಿ ಮನುಷ್ಯ-ಮನುಷ್ಯರ ನಡುವೆ ದ್ವೇಷದ ಬೆಂಕಿ ಹಬ್ಬುತ್ತಿದೆ. ಜಾತಿ-ಧರ್ಮಗಳ ಹೆಸರಿನಲ್ಲಿ ಕಲಹಗಳು ಮತ್ತು ಹಿಂಸೆ-ರಕ್ತಪಾತಗಳು ಹೆಚ್ಚುತ್ತಿವೆ. ಈ ಸಮಸ್ಯೆಗೆ ಪರಿಹಾರ ನೀಡಲು ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಕೋಟ-ಪಡುಕೆರೆಯ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ರಾಜೇಂದ್ರ ಎಸ್. ನಾಯಕ್‌ ಹೇಳಿದರು.

ಅವರು ಕೋಟ-ಪಡುಕೆರೆಯ ಲಕ್ಷ್ಮಿ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಂಘ ಮತ್ತು ಐಕ್ಯೂಎಸಿ ಆಶ್ರಯದಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕುಂದಾಪುರದ ಜೆಸ್ಸಿ ಎಲಿಜಬೆತ್ ಜೋಸೆಫ್ ಮಲೆಯಾಳದಿಂದ ಅನುವಾದಿಸಿದ ಹೆಂಡತಿ ಕಾದಂಬರಿಯ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಇಂದಿನ ಯುವಜನರು ಹೆಚ್ಚು ಹೆಚ್ಚು ಸಾಹಿತ್ಯ ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ಬಾವಿಯೊಳಗಿನ ಕಪ್ಪೆಗಳ ಹಾಗಿರದೆ ವಿಶಾಲವಾದ ಪ್ರಪಂಚದ ಬಗ್ಗೆ ತಿಳಿದುಕೊಳ್ಳಲು ಕನ್ನಡ ಸಾಹಿತ್ಯ ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಿಂದ ಅನುವಾದವಾದ ಸಾಹಿತ್ಯವನ್ನೂ ಓದಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ.

ಪುಸ್ತಕದ ಲೇಖಕಿ ಜೆಸ್ಸಿ ಎಲಿಜಬೆತ್ ಜೋಸೆಫ್ ಪ್ರಾಸ್ತಾವಿಕವಾಗಿ ತಾನು ಅನುವಾದದಲ್ಲಿ ತೊಡಗಿಕೊಂಡ ಬಗೆಯನ್ನು ವಿವರಿಸಿದರು. ಕೋಟೇಶ್ವರದ ಆಚಾರ್ಯ ನರ್ಸಿಂಗ್ ಹೋಂನ ವೈದ್ಯಾಧಿಕಾರಿ, ಖ್ಯಾತ ಸಾಹಿತಿ ಮತ್ತು ಸ್ಥಿತಿಗತಿ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾದ ಡಾ. ಭಾಸ್ಕರ ಆಚಾರ್ಯ ಪುಸ್ತಕ ಲೋಕಾರ್ಪಣೆ ಮಾಡಿ ಪ್ರಪಂಚವನ್ನು ಒಂದಾಗಿಸುವಲ್ಲಿ ಅನುವಾದ ಮತ್ತು ಅನುವಾದಕರ ಮಹತ್ವದ ಕುರಿತು ಮಾತನಾಡಿದರು.

ಕನ್ನಡ ವಿಭಾಗದ ಮುಖ್ಯಸ್ಥ ಡಾ. ರಮೇಶ ಆಚಾರ್ ಪುಸ್ತಕದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹೇಳಿದರು. ಲೇಖಕಿ ಪಾರ್ವತಿ ಜಿ. ಐತಾಳ್ ಶುಭಾಶಂಸನೆ ಗೈದರು. ಐಕ್ಯೂಎಸಿ ಮುಖ್ಯಸ್ಥ ಸುಬ್ರಹ್ಮಣ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಾಣಿಜ್ಯಶಾಸ್ತ್ರ ವಿಭಾಗದ ಸೌಮ್ಯಾ ಕೆ. ಕಾರ್ಯಕ್ರಮ ನಿರೂಪಿಸಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪ್ರಕಾಶ್ ಕೆ. ಸ್ವಾಗತಿಸಿ, ಇಂಗ್ಲಿಷ್ ಉಪನ್ಯಾಸಕಿ ಸುಷ್ಮಾ ಧನ್ಯವಾದ ಸಮರ್ಪಣೆ ಮಾಡಿದರು.

Exit mobile version