Kundapra.com ಕುಂದಾಪ್ರ ಡಾಟ್ ಕಾಂ

ಸಾಲಿಗ್ರಾಮ ಘನ ತ್ಯಾಜ್ಯ ಘಟಕ ಉದ್ಘಾಟಿಸಿದರೆ ಕಪ್ಪು ಬಾವುಟ ಪ್ರದರ್ಶಿಸುತ್ತೇವೆ: ನಾಗೇಂದ್ರ ಪುತ್ರನ್ ಎಚ್ಚರಿಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಪಾರಂಪಳ್ಳಿಯಲ್ಲಿ ಉದ್ಘಾಟನೆಗೆ ತಯಾರಿ ನಡೆಸಿರುವ ಘನ ತ್ಯಾಜ್ಯ ಘಟಕ ಕಾನೂನು ಬಾಹಿರವಾಗಿದ್ದು ಇದರ ಉದ್ಘಾಟನೆಗೆ ಪ್ರಯತ್ನಿಸಿದರೆ ಸ್ಥಳೀಯರು ಶಾಂತಿಯುತವಾಗಿ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟಿಸುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ನಾಗೇಂದ್ರ ಪುತ್ರನ್ ತಿಳಿಸಿದರು.

ಅವರು ಸಾಲಿಗ್ರಾಮದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯರ ಪರವಾಗಿ ಮಾತನಾಡಿದರು. ಈ ಘಟಕಕ್ಕೆ ಸಿ.ಆರ್.ಝಡ್. ಅನುಮತಿ ಇದುವರೆಗೆ ಸಿಕ್ಕಿಲ್ಲ. ಲೋಕಾಯುಕ್ತದಲ್ಲಿ ಪ್ರಕರಣ ಇತ್ಯರ್ಥಕ್ಕೆ ಬಾಕಿ ಇದೆ. ಹೀಗಾಗಿ ಎಲ್ಲಾ ಅನುಮತಿ ಪಡೆಯುವ ತನಕ ಹಾಗೂ ಹೈಕೋರ್ಟ್ ನಲ್ಲಿ ಸ್ಥಳೀಯರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆದು ತೀರ್ಪು ಪ್ರಕಟಗೊಳ್ಳುವ ತನಕ ಇದರ ಉದ್ಘಾಟನೆ ನಡೆಸಬಾರದು.

ಒಂದು ವೇಳೆ ಕಾನೂನುಬಾಹಿರವಾಗಿ ಉದ್ಘಾಟನೆಗೆ ಮುಂದಾದರೆ ಜನಪ್ರತಿನಿಧಿಗಳು ಇದರಲ್ಲಿ ಭಾಗವಹಿಸಬಾರದು. ಮುಂದೆ ಘಟಕದ ವಿರುದ್ಧವಾಗಿ ತೀರ್ಪು ಬಂದು ಕೋಟ್ಯಾಂತರ ರೂ. ಹಾನಿಯಾದರೆ ಅದಕ್ಕೆ ಅಧಿಕಾರಿಗಳು, ಇಂದಿನ ಜನಪ್ರತಿನಿಧಿಗಳು ನೇರ ಹೊಣೆಯಾಗುತ್ತಾರೆ ಎಂದು ಅವರು ಎಚ್ಚರಿಕೆ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಹೇಶ್ ಪೂಜಾರಿ, ಸಂತೋಷ್ ಪೂಜಾರಿ, ಅಶೋಕ್ ಪೂಜಾರಿ, ನಾಗರಾಜ್, ಗಣೇಶ್ ಉಪಸ್ಥಿತರಿದ್ದರು.

Exit mobile version