Kundapra.com ಕುಂದಾಪ್ರ ಡಾಟ್ ಕಾಂ

ಅಂಡರ್ -19 ವನಿತಾ ದೇಶೀಯ ಟಿ20 ಟೂರ್ನಿ: ಕುಂದಾಪುರದ ರಚಿತಾ ಹತ್ವಾರ್‌ ಸರಣಿಶ್ರೇಷ್ಠ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕುಂದಾಪುರ:
ಬಿಸಿಸಿಐ ಆಯೋಜಿಸಿದ ಅಂಡರ್ -19 ವನಿತಾ ದೇಶೀಯ ಟಿ20 ಟೂರ್ನಿಯಲ್ಲಿ ವಿಕೆಟ್ ಕೀಪರ್‌ ಹಾಗೂ ಆರಂಭಿಕ ಆಟಗಾರ್ತಿಯಾಗಿರುವ ಕುಂದಾಪುರದ 16ರ ಹರೆಯದ ರಚಿತಾ ಹತ್ವಾ‌ರ್ ಪಂದ್ಯಾವಳಿ ಯುದ್ದಕ್ಕೂ ಉತ್ತಮ ಪ್ರದರ್ಶನ ನೀಡಿ, ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ರಚಿತಾ ಆಡಿದ 7 ಪಂದ್ಯಗಳಲ್ಲಿ 2 ಅರ್ಧ ಶತಕದೊಂದಿಗೆ ಕೂಟದಲ್ಲೇ ಗರಿಷ್ಠ 234 ರನ್ (38 ಫೋರ್, 1 ಸಿಕ್ಸರ್) ಬಾರಿಸಿದರು. ಈ ಸಾಧನೆಗಾಗಿ ಸರಣಿಶ್ರೇಷ್ಠ ಪ್ರಶಸ್ತಿಯೊಂದಿಗೆ 75 ಸಾವಿರ ರೂ. ನಗದನ್ನು ಪಡೆದರು.

ಟೂರ್ನಿಯಲ್ಲಿ ಅಜೇಯ ಗೆಲುವಿನ ಆಟವನ್ನು ಮುಂದುವರಿಸಿದ ಕರ್ನಾಟಕದ ವನಿತೆಯರ ತಂಡ ಚಾಂಪಿಯನ್ ಆಗಿ ಮೂಡಿಬಂದಿದೆ. ಬುಧವಾರ ಕೋಲ್ಕತಾದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಆಂಧ್ರಪ್ರದೇಶವನ್ನು ಸೋಲಿಸಿ ಪ್ರಶಸ್ತಿ ಜಯಿಸಿತು.

ಲೀಗ್ ಪಂದ್ಯಗಳನ್ನು ಗೆದ್ದು ಅಗ್ರಸ್ಥಾನ ಪಡೆದ ಕರ್ನಾಟಕ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಅಲ್ಲಿ ದಿಲ್ಲಿಯನ್ನು ಹಾಗೂ ಸೆಮಿಫೈನಲ್‌ನಲ್ಲಿ ಬರೋಡಾ ತಂಡವನ್ನು ಸೋಲಿಸಿ ಫೈನಲ್‌ ಗೆ ಲಗ್ಗೆಯಿಟ್ಟಿತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಂಧ್ರ ಪ್ರದೇಶ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 119 ರನ್ ಗಳಿಸಿತು. ಕರ್ನಾಟಕ 17.4 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗುರಿ ತಲುಪುವಲ್ಲಿ ಯಶಸ್ವಿಯಾಯಿತು.

Exit mobile version