ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಹಲವು ವರ್ಷಗಳಿಂದ ಆಮೆನಡಿಗೆಯಂತೆ ಸಾಗಿದ್ದ ಕುಂದಾಪುರ ಪ್ಲೈಓವರ್ ಕಾಮಗಾರಿ ಅಂತ್ಯಗೊಂಡಿದ್ದು ಭಾನುವಾರ ಸಂಜೆಯಿಂದ ಸಂಚಾರಕ್ಕೆ ಮುಕ್ತವಾಗಿದೆ.
ಕುಂದಾಪುರ ಪ್ಲೈಓವರ್ ಕಾಮಗಾರಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಕುಂದಾಪುರ ಹೆದ್ದಾರಿ ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳು ಹಲವು ಭಾರಿ ಪ್ರತಿಭಟನೆ ನಡೆಸಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಗಮನ ಸೆಳೆದಿದ್ದರು. ಕುಂದಾಪುರ ಪುರಸಭೆಯ ಸಾಮಾನ್ಯ ಸಭೆ ಹಾಗೂ ವಿವಿಧೆಡೆ ಈ ಬಗ್ಗೆ ಸಾಕಷ್ಟು ಭಾರಿ ಚರ್ಚೆ ನಡೆದಿದ್ದವು. ಅಂತಿಮವಾಗಿ ಪ್ಲೈಓವರ್ ಸಂಚಾರಕ್ಕೆ ಮುಕ್ತಗೊಂಡಿರುವುದು ಕಳೆದೊಂದು ದಶಕದಿಂದ ಸಂಚಾರ ಅಡಚಣೆ ಎದುರಿಸುತ್ತಿದ್ದ ನಾಗರಿಕರು ಸದ್ಯ ನಿಟ್ಟುಸಿರು ಬಿಡುವಂತಾಗಿದೆ.
ಈ ನಡುವೆ ಪ್ಲೈಓವರ್ ಕಾಮಗಾರಿಯನ್ನು ತರಾತುರಿಯಲ್ಲಿ ನಡೆಸಿರುವ ಗುತ್ತಿಗೆದಾರ ಸಂಸ್ಥೆಯ ನಡೆಯ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಕುಂದಾಪುರದ ನಾಗರಿಕರು ವಾರದ ಹಿಂದೆ ಹೆದ್ದಾರಿ ಹೋರಾಟ ಸಮಿತಿ ನೇತೃತ್ವದಲ್ಲಿ ಸಭೆ ಸೇರಿ ಪ್ಲೈಓವರ್ ಕಾಮಗಾರಿಯ ಲೋಪದೋಷ, ಅಸಮರ್ಕಪವಾಗಿರುವ ಸರ್ವಿಸ್ ರಸ್ತೆ, ಬಸ್ರೂರು ಅಂಡರ್ ಪಾಸ್, ಶಾಸ್ತ್ರಿ ವೃತ್ತದ ಬಳಿಯ ರಸ್ತೆ ದುರಸ್ತಿ ಮೊದಲಾದ ಅಂಶಗಳ ಕುರಿತಾಗಿ ಕುಂದಾಪುರ ಉಪವಿಭಾಗಾಧಿಕಾರಿಗಳ ಮೂಲಕ ಉಡುಪಿ ಜಿಲ್ಲಾಧಿಕಾರಿ ಗಮನ ಸೆಳೆಯುವ ಕೆಲಸ ಮಾಡಿತ್ತು. ಆದರೆ ನಾಗರಿಕರ ಮನವಿಗೆ ಈವರೆಗೆ ಜಿಲ್ಲಾಡಳಿತದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಗುತ್ತಿಗೆದಾರ ಕಂಪೆನಿ ಬಾಕಿ ಕಾಮಗಾರಿ ಅಲ್ಲಿಗೆ ನಿಲ್ಲಿಸಿ ಪರಾರಿಯಾಗುವರೇ ಎಂಬ ಆತಂಕವೂ ಇದೆ.
ಪ್ಲೈಓವರ್ ಸಂಚಾರಕ್ಕೆ ಮುಕ್ತವಾಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ಲೈಓವರ್ ಪೋಟೋ ವೀಡಿಯೋ ಹಂಚಿಕೊಂಡು ಸಂಭ್ರಮಿಸಿದ್ದಾರೆ.