ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಲಾವಿದನೊರ್ವ ಪಾತ್ರ ನಿರ್ವಹಿಸುವುದು ಸುಲಭದ ಮಾತಲ್ಲ ಬದಲಾಗಿ ಅವನ ಪರಿಶ್ರಮ ಹಾಗೂ ರಂಗದಲ್ಲಿ ಕಠಿಣವಾಗಿ ಪಾತ್ರ ನಿರ್ವಹಣೆ ಆದರದ ಮೇಲೆ ಕಲಾಭಿಮಾನಿಗಳನ್ನು ಸಂಪಾದಿಸುತ್ತಾನೆ ಎಂದು ಹಂಗಾರಕಟ್ಟೆ ಯಕ್ಷಗಾನ ಕಲಾಕೇಂದ್ರದ ಯಕ್ಷಗುರು ಸದಾನಂದ ಐತಾಳ್ ಹೇಳಿದರು.
ಅವರು ಇಲ್ಲಿನ ಕೋಟದ ಅಮೃತೇಶ್ವರೀ ಶ್ರೀ ದೇಗುಲದ ವತಿಯಿಂದ ನಡೆಸಲ್ಪಡುವ ದಶಾವತಾರ ಮೇಳದ 2025-26ನೇ ಸಾಲಿನ ತಿರುಗಾಟದ ದೇವರ ಪ್ರಥಮ ಸೇವೆ ಆಟ ಆವಳಿ ಯಕ್ಷ ಸಾಧಕರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.

ಕಲಾಭಿಮಾನಿಗಳಿಗೆ ರಂಗದೊಕುಳಿ ನೀಡುವುದರ ಜತೆಗೆ ಭಾಷಾ ಪರಿಜ್ಞಾನ ಹೆಚ್ಚಿಸಿ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಾರೆ, ಯಕ್ಷಕಲಾವಿದನೊರ್ವ ವೈಯಕ್ತಿಕ ಬದುಕಿನ ಬಗ್ಗೆ ಮರೆತು ಕಲೆಗೆ ಜೀವತುಂಬಿ ಸ್ವಸ್ಥ ಸಮಾಜ ನಿರ್ಮಾಣ ಕಾಯಕದಲ್ಲಿ ಪಾತ್ರ ವಹಿಸುತ್ತಾನೆ. ಅಂತಹ ಕಲಾವಿದರನ್ನು ಗುರುತಿಸಿ ನಾರಾಯಣಪ್ಪ ಉಪ್ಪೂರ ಹಾಗೂ ಕೋಟ ವೈಕುಂಠ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣ ಎಂದರು.
ಸಭೆಯ ಅಧ್ಯಕ್ಷತೆಯನ್ನು ದೇಗುಲದ ಅಧ್ಯಕ್ಷ ಆನಂದ್ ಸಿ. ಕುಂದರ್ ವಹಿಸಿದ್ದರು. ಇದೇ ವೇಳೆ ಶ್ರೀ ಕ್ಷೇತ್ರದಿಂದ ನೀಡುವ ಪ್ರಾಚಾರ್ಯ ದಿ| ಎಮ್. ನಾರಾಯಣಪ್ಪ ಉಪ್ಪೂರ ಪ್ರಶಸ್ತಿಯನ್ನು ಖ್ಯಾತ ಭಾಗವತ ನಾರಾಯಣ ಶಬರಾಯ ಜಿ.ವಿ, ದಿ. ಕೋಟ ವೈಕುಂಠ ಸ್ಮರಣಾರ್ಥ ಅವರ ಪುತ್ರ ಉಮೇಶ್ ರಾಜ್ ಬೆಂಗಳೂರು ಅವರು ನೀಡುವ ಕೋಟ ಯಕ್ಷಕಿನ್ನರ ಕೋಟ ವೈಕುಂಠ ಪುರಸ್ಕಾರವನ್ನು ಪ್ರಸಿದ್ಧ ಕಲಾವಿದ ಜಯಾನಂದ ಹೊಳೆಕೊಪ್ಪ ಅವರುಗಳಿಗೆ ಪ್ರದಾನಿಸಲಾಯಿತು.
ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಬಂಗೇರ ವಿಶೇಷ ಅಭಿನಂದನೆ ನೀಡಲಾಯಿತು.
ಮುಖ್ಯ ಅಭ್ಯಾಗತರಾಗಿ ಸೌಕೂರು ದುರ್ಗಾಪರಮೇಶ್ವರಿ ದೇಗುಲದ ಆಡಳಿತನ ಅಧ್ಯಕ್ಷ ಪಿ. ಕಿಶನ್ ಹೆಗ್ಡೆ, ಕಲಾಪೀಠದ ಮುಖ್ಯಸ್ಥ ಕೆ. ನರಸಿಂಹ ತುಂಗ, ಬ್ರಹ್ಮಾವರ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ, ಉದ್ಯಮಿ ಉಮೇಶ್ ರಾಜ್ ಬೆಂಗಳೂರು, ದೇಗುಲದ ಟ್ರಸ್ಟಿಗಳಾದ ಸುಭಾಷ್ ಶೆಟ್ಟಿ, ಸುಧಾ ಪೂಜಾರಿ, ಜ್ಯೋತಿ ಡಿ. ಕಾಂಚನ್, ಸುಬ್ರಾಯ ಜೋಗಿ, ಶಿವ ಪೂಜಾರಿ ಉಪಸ್ಥಿತರಿದ್ದರು. ದೇಗುಲದ ಟ್ರಸ್ಟಿ ಗಣೇಶ್ ನೆಲ್ಲಿಬೆಟ್ಟು ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತಿಸಿ ವಂದಿಸಿದರು.
ದೇಗುಲದಲ್ಲಿ ಪೂರ್ವಾಹ್ನ ಗಣಹೋಮ ಮತ್ತು ಗಣಪತಿ ಪೂಜೆ, ರಾತ್ರಿ ದೇವರ ಪ್ರಥಮ ಸೇವೆ ಆಟ ಯಕ್ಷಗಾನ ಪ್ರದರ್ಶನ ಜರಗಿತು.