Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ಡಾ. ವೀರೇಂದ್ರ ಹೆಗ್ಗಡೆ ಜನ್ಮದಿನಾಚರಣೆ ಪ್ರಯುಕ್ತ ಆರೋಗ್ಯ ತಪಾಸಣೆ ಶಿಬಿರ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಜನರು ನಮ್ಮ ಬಗ್ಗೆ ಅನವಶ್ಯಕವಾಗಿ  ಮಾಡುವ ಟೀಕೆಗಳು ಶಾಶ್ವತವಲ್ಲ ಅವುಗಳು ಇಂದು ಹುಟ್ಟಿ ನಾಳೆ ಸಾಯುತ್ತವೆ. ಆದರೆ ಜನರಿಗಾಗಿ ನಾವು ಮಾಡುವ ಒಳ್ಳೆ ಕೆಲಸಗಳಿಗೆ ಅಳಿವಿಲ್ಲ. ಅದು ಶಾಶ್ವತವಾಗಿ ನಮಗೆ ಒಳ್ಳೆ ಹೆಸರು ತರುತ್ತದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಅವರು ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಜನ್ಮ ದಿನಾಚರಣೆ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ. ಯೋಜನೆ, ಬಿ.ಸಿ. ಟ್ರಸ್ಟ್ ಬ್ರಹ್ಮಾವರ ತಾಲೂಕು, ಎಸ್‌ಡಿಎಂ ಆಯುರ್ವೇದ ಕಾಲೇಜು ಆಸ್ಪತ್ರೆ ಮತ್ತು ಸಂಶೋಧಕ ಕೇಂದ್ರ ಕುತ್ಪಾಡಿ ಇವರ ಸಹಯೋಗದೊಂದಿಗೆ ಎಸ್.ಡಿ.ಎಂ. ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ನುರಿತ ವೈದ್ಯರಿಂದ ಕೋಟ ಮಾಂಗಲ್ಯ ಮಂದಿರದಲ್ಲಿ ನಡೆದ ಆರೋಗ್ಯ ತಪಾಸಣೆ ಉಚಿತ ಶಿಬಿರ ಮತ್ತು ಆರೋಗ್ಯ ಮಾಹಿತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಸಾಮಾಜಿಕ ಕಾಳಜಿಯ ಕಾರ್ಯಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಅವರ ಕನಸುಗಳಿಗೆ ಶಕ್ತಿ ತುಂಬುವ ಕಾರ್ಯ ನಾವೆಲ್ಲ ಜತೆಯಾಗಿ ಮಾಡಬೇಕು ಎಂದರು.

ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ನಮಗೆಲ್ಲ ಅಪಾರ ಗೌರವವಿದೆ. ಹೀಗಾಗಿ ಖಾವಂದರ ಮನಸ್ಸಿಗೆ ನೋವಾದಾಗ ನಮಗೆಲ್ಲ ಅಪಾರ ಬೇಸರವಾಗಿತ್ತು. ಅವರಿಗೆ ಇನ್ನೂ ಹೆಚ್ಚಿನ ಸಮಾಜಸೇವೆ ಮಾಡುವ ಶಕ್ತಿ ದೇವರು ನೀಡಲಿ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಕರಾವಳಿ ಪ್ರಾದೇಶಿಕ ವಿಭಾಗದ ನಿರ್ದೇಶಕ ಆನಂದ ಸುವರ್ಣ, ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ, ಎಸ್.ಡಿ.ಎಂ. ಕಾಲೇಜು ವೈದ್ಯಕೀಯ ನಿರ್ದೇಶಕ ಡಾ.ನಾಗರಾಜ್ , ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಗಾಣಿಗ ಅಚ್ಲಾಡಿ, ಕೋಟ ಗ್ರಾ.ಪಂ. ಅಧ್ಯಕ್ಷೆ ಜ್ಯೋತಿ ಭರತ್ ಶೆಟ್ಟಿ, ವಲಯ ಜನಜಾಗೃತಿ ಸಮಿತಿ ಅಧ್ಯಕ್ಷ ಜಯರಾಮ ಶೆಟ್ಟಿ ಇದ್ದರು.

ಯೋಜನೆಯ ತಾಲೂಕು ನಿರ್ದೇಶಕ ರಮೇಶ್ ಪಿ.ಕೆ. ಸ್ವಾಗತಿಸಿ, ವಲಯ ಮೇಲ್ವಿಚಾರಕ ನಾಗೇಶ್ ಕಾರ್ಯಕ್ರಮ ನಿರೂಪಿಸಿ, ಪುಷ್ಪಲತಾ ವಂದಿಸಿದರು.

Exit mobile version