Kundapra.com ಕುಂದಾಪ್ರ ಡಾಟ್ ಕಾಂ

ಟ್ರೈ ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಸಂಸ್ಥೆ: ಸೋಮಶೇಖರ್ ವಿ.ಕೆ.

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಮೂಡುಬಿದಿರೆ: 
ಟ್ರೈ ಗ್ರಾಹಕರ ಹಕ್ಕುಗಳನ್ನು ಕಾಪಾಡುವ ಪ್ರಮುಖ ಸಂಸ್ಥೆಯಾಗಿದ್ದು, ಗ್ರಾಹಕರು ತಮ್ಮ ಹಕ್ಕುಗಳನ್ನು ತಿಳಿದುಕೊಂಡು ದೂರು ಸಲ್ಲಿಸಿದರೆ ಉತ್ತಮ ಸೇವೆಗಳನ್ನು ಪಡೆಯಲು ಸಾಧ್ಯವೆಂದು ಕರ್ನಾಟಕದ ಗ್ರಾಹಕ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟದ ಮುಖ್ಯ ಪೋಷಕ ಹಾಗೂ ಸ್ಥಾಪಕ ಸೋಮಶೇಖರ್ ವಿ.ಕೆ. ತಿಳಿಸಿದರು.

ಅವರು ಆಳ್ವಾಸ್ ಸಂಸ್ಥೆಯ ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಕರ್ನಾಟಕದ ಗ್ರಾಹಕ ಮತ್ತು ಸ್ವಯಂಸೇವಾ ಸಂಸ್ಥೆಗಳ ಸಂಘಟಿತ ಒಕ್ಕೂಟ ಹಾಗೂ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಗ್ರಾಹಕರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ದೂರಸಂಪರ್ಕ ಸೇವೆಗಳ ಕುರಿತ ಅನೇಕ ಮಾಹಿತಿಗಳನ್ನು ನೀಡಿದ ಅವರು, ನೆಟ್ವರ್ಕ್ ತೊಂದರೆಗಳು, ನಿಧಾನಗತಿಯ ಇಂಟರ್ನೆಟ್, ಹೆಚ್ಚುವರಿ ಶುಲ್ಕ ವಿಧಿಸುವುದು, ಅನುಮತಿ ಇಲ್ಲದೆ ಸಿಮ್ ಸಕ್ರಿಯಗೊಳ್ಳುವುದು, ಕೆವೈಸಿ (ಏಙಅ) ಸಮಸ್ಯೆಗಳು, ಮೊಬೈಲ್ ನಂಬರ್ ಪೋರ್ಟಿಂಗ್ ವಿಳಂಬವಾದರೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಸಿದರು.

ಗ್ರಾಹಕರಿಗೆ ಟ್ರೈ ನೀಡಿರುವ ಮುಖ್ಯ ಹಕ್ಕುಗಳಾದ ಗುಣಮಟ್ಟದ ಸೇವೆ ಪಡೆಯುವ ಹಕ್ಕು, ಸರಿಯಾದ ಬಿಲ್ ಪಡೆಯುವ ಹಕ್ಕು ಮುಂತಾದ ವಿಷಯಗಳನ್ನು ವಿವರಿಸಿದರು.  ಸ್ಪ್ಯಾಮ್ ಕರೆಗಳು ಮತ್ತು  ಎಸ್‌ಎಮ್‌ಎಸ್‌ಗಳನ್ನು ತಡೆಯಲು 1909ಕ್ಕೆ ಕರೆ ಮಾಡಿ ಡಿಎನ್‌ಡಿ (DND) ಸೇವೆಯನ್ನು ಸಕ್ರಿಯಗೊಳಿಸಬಹುದೆಂದು ತಿಳಿಸಿದರು.

ಮೊಬೈಲ್ ಸಂಖ್ಯೆ ಬದಲಿಸದೆ ನೆಟ್ವರ್ಕ್ ಪೋರ್ಟ್ ಮಾಡಿಕೊಳ್ಳುವ ಹಕ್ಕು ಗ್ರಾಹಕರಿಗೆ ಇರುವುದನ್ನೂ ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು. 2012ರ ಗ್ರಾಹಕ ಸಂರಕ್ಷಣಾ ನಿಯಮಗಳಡಿ ಗುಣಮಟ್ಟದ ಸೇವೆ ಹಾಗೂ ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ತಿಳಿಸಿದರು.

ಜಿಯೋ, ಏರ್ಟೆಲ್, ವಿಐ ಬಳಕೆದಾರರು 198ಗೆ ಹಾಗೂ ಬಿಎಸ್‌ಎನ್‌ಎಲ್ ಗ್ರಾಹಕರು 1500 ಗೆ ಕರೆ ಮಾಡಿ ದೂರು ಸಲ್ಲಿಸಬಹುದು ಎಂದು ತಿಳಿಸಿದ ಅವರು, ದೂರು ಸಂಖ್ಯೆಯನ್ನು ಕಡ್ಡಾಯವಾಗಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ದೂರು ಪರಿಹಾರವಾಗದಿದ್ದಲ್ಲಿ ಮೊದಲು ನೋಡಲ್ ಅಧಿಕಾರಿಯನ್ನು ಸಂಪರ್ಕಿಸಿ,  ಸಮಸ್ಯೆ ಮುಂದುವರಿದರೆ ಮೇಲಾಧಿಕಾರಿಗೆ ದೂರು ನೀಡಬಹುದು. ಸಾಮಾನ್ಯವಾಗಿ 45 ದಿನಗಳ ಒಳಗೆ ಪರಿಹಾರ ದೊರೆಯುತ್ತದೆ ಎಂದು ವಿವರಿಸಿದರು.

ಒಟಿಪಿಯನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ರೀಚಾರ್ಜ್ ಮಾಡುವ ಮೊದಲು ಅದರ ಯೋಜನೆಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಬೇಕು, ಸೇವಾ ಗುಣಮಟ್ಟ ತೃಪ್ತಿಕರವಾಗಿರದಿದ್ದರೆ ನೆಟ್ವರ್ಕ್ ಪೋರ್ಟ್ ಮಾಡಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಸೈಬರ್ ಕೈಮ್ ಪೋಲೀಸ್ ಸಬ್ ಇನ್ಸಪೆಕ್ಟರ್ ಪ್ರತಿಭಾ ಮಾತನಾಡಿ, ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸೈಬರ್ ಕ್ರೈಮ್ ಪ್ರಕರಣಗಳನ್ನು ನಿಯಂತ್ರಿಸಲು ಜಾಗೃತಿ ಮಾತ್ರವೇ ಪರಿಣಾಮಕಾರಿ ಮಾರ್ಗ. ಹಿಂದೆ ಕಡಿಮೆ ಪ್ರಮಾಣದಲ್ಲಿದ್ದ ಸೈಬರ್ ಪ್ರಕರಣಗಳು ಇಂದು ಮೊಬೈಲ್ ಮತ್ತು ಇಂಟರ್ನೆಟ್ ಬಳಕೆಯಿಂದಾಗಿ ಉಲ್ಬಣಗೊಂಡಿದೆ. ವಿಶೇಷವಾಗಿ ಫ್ರಾಡ್ ಟ್ರಾನ್ಸಾಕ್ಷನ್‌ಗಳು ದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ಪ್ರಮುಖ ಸೈಬರ್ ಅಪರಾಧಗಳಾಗಿವೆ ಎಂದರು.

ಉಡುಪಿ ಗ್ರಾಹಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾತುಗಳನ್ನಾಡಿದರು. ಕಾರ್ಯಕ್ರಮದಲ್ಲಿ ಮೂಲ್ಕಿ–ಮೂಡುಬಿದಿರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮನಾಥ್ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  

ಪೋಲೀಸ್ ಸಬ್ ಇನ್ಸಪೆಕ್ಟರ್ ಪ್ರತಿಭಾ, ಸಂಘದ ಪದಾಧಿಕಾರಿ ವಿದ್ಯಾ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚರ್ಯ ಸದಾಕತ್, ಉಪಪ್ರಾಂಶುಪಾಲೆ ಝಾನ್ಸಿ ಇದ್ದರು. ಕಾರ್ಯಕ್ರಮ ಸಂಯೋಜಕಿ ಡಾ. ಸುಲತಾ ಸ್ವಾಗತಿಸಿ, ವಾಣಿಜ್ಯ ವಿಭಾಗದ ಉಪನ್ಯಾಸಕಿ ರಶ್ಮಿನ್ ನಿರೂಪಿಸಿ, ಉಪನ್ಯಾಸಕಿ ಮೇಘನಾ ವಂದಿಸಿದರು.  

Exit mobile version