ಗ್ರಾಹಕರು ವಸ್ತುಗಳನ್ನು ಖರೀದಿಸುವಾಗ ಎಚ್ಚರ ವಹಿಸಬೇಕು: ಜಿಲ್ಲಾಧಿಕಾರಿ

Click Here

Call us

Call us

Call us

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಉಡುಪಿ:
ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಗ್ರಾಹಕರಾಗಿರುತ್ತಾರೆ. ದೈನಂದಿನ ವಸ್ತುಗಳು ಸೇರಿದಂತೆ ಮತ್ತಿತರ ಸೇವೆಯನ್ನು ಪಡೆಯುವಾಗ ವಸ್ತುಗಳ ಗುಣಮಟ್ಟ ಪರೀಕ್ಷಿಸಿ, ಎಚ್ಚರಿಕೆಯಿಂದ ಖರೀದಿಸಬೇಕು. ಒಂದೊಮ್ಮೆ ಮೋಸವಾದಲ್ಲಿ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಹೇಳಿದರು.

Call us

Click Here

ಅವರು ಅಂದು ನಗರದ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಉಪೇಂದ್ರ ಮಂಟಪದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಕಾನೂನು ಮಾಪನ ಶಾಸ್ತ್ರ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಬಳಕೆದಾರರ ವೇದಿಕೆ ರಿ., ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ಮಾರುಕಟ್ಟೆಗಳು ಜಾಹೀರಾತು ಹಾಗೂ ಇತರೆ ಮಾಧ್ಯಮಗಳ ಮೂಲಕ ಸಾರ್ವಜನಿಕರನ್ನು ತನ್ನತ್ತ ಆಕರ್ಷಿಸುತ್ತಿದ್ದು, ಅವುಗಳು ಸರಕು/ ಸೇವೆಗಳನ್ನು ಪಡೆಯುವಂತೆ ಪ್ರಚೋದಿಸುತ್ತಿವೆ. ನಮಗಿರುವ ಅವಶ್ಯಕತೆ ಹಾಗೂ ಅನಿವಾರ್ಯತೆಗಳನ್ನು ಅರಿತು, ಅನಾವಶ್ಯಕವಾಗಿ ದುಂದುವೆಚ್ಚ ಮಾಡದೇ ಸರಕು ಹಾಗೂ ಸೇವೆಗಳ ಸತ್ಯಾಸತ್ಯತೆಗಳನ್ನು ತಿಳಿದುಕೊಂಡು ನಂತರ ಖರೀದಿಸಬೇಕು ಎಂದರು.

ಆಹಾರ, ಔಷಧಿ ಸೇರಿದಂತೆ ಮತ್ತಿತರ ದೈನಂದಿನ ವಸ್ತುಗಳನ್ನು ಖರೀದಿಸುವ ಮೊದಲು ಅದರ ಉತ್ಪಾದನಾ ದಿನಾಂಕ ಹಾಗೂ ಎಕ್ಸ್ಪೈರಿ ದಿನಾಂಕವನ್ನು ಪರೀಕ್ಷಿಸಿ, ನಂತರ ಖರೀದಿಸುವಂತಹ ಸಾಮಾನ್ಯ ಜ್ಞಾನವನ್ನು ಹೊಂದಿರಬೇಕು. ಅವಧಿ ಮುಗಿದ ಔಷಧಿಗಳನ್ನು ಸಹ ಮಾರಾಟ ಮಾಡುವುದು ಕೂಡ ಕಾನೂನು ಬಾಹಿರವಾಗಿದ್ದು, ಸಾರ್ವಜನಿಕರಿಗೆ ಗ್ರಾಹಕರ ರಕ್ಷಣಾ ಕಾಯಿದೆ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದರು. 

ಗ್ರಾಹಕರು ಎಷ್ಟೇ ವಿದ್ಯಾವಂತರಾಗಿದ್ದರೂ ಸಹ ತಮಗೆ ಅರಿವಿಲ್ಲದಂತೆ ಮೋಸ ಹೋಗುವ ಸಾಧ್ಯತೆಗಳು ಹೆಚ್ಚು ಇರುತ್ತವೆ. ಮಾರುಕಟ್ಟೆಯಲ್ಲಿ ವ್ಯವಹರಿಸುವ ಸಂದರ್ಭದಲ್ಲಿ ಜಾಗೃತರಾಗಿ, ತಮ್ಮ ಹಕ್ಕುಗಳು ಮತ್ತು ಕಾಯಿದೆಗಳ ಬಗ್ಗೆ ಅರಿವನ್ನು ಹೊಂದಿ, ತಮಗೆ ಅನ್ಯಾಯವಾಗದ ರೀತಿಯಲ್ಲಿ ಎಚ್ಚರ ವಹಿಸಬೇಕು ಎಂದರು.

Click here

Click here

Click here

Call us

Call us

ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರದ ಬಳಕೆದಾರರ ವೇದಿಕೆಯ ಸಂಚಾಲಕ ಯು. ಜಿ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಒಬ್ಬ ವ್ಯಕ್ತಿಯು ಹುಟ್ಟಿನಿಂದ ಕೊನೆಯವರೆಗೂ ತನಗೆ ಅಗತ್ಯವಿರುವ ವಸ್ತುಗಳನ್ನು ಹಾಗೂ ಸೇವೆಗಳನ್ನು ಪ್ರತ್ಯಕ್ಷ ಹಾಗೂ ಪರೋಕ್ಷ ರೀತಿಯಲ್ಲಿ ಪಡೆದುಕೊಂಡು ಬಳಕೆದಾರನಾಗುತ್ತಾನೆ. ತಾನು ಪಡೆದಂತಹ ವಸ್ತು/ಸೇವೆಯಲ್ಲಿ ಯಾವುದಾದರೂ ನ್ಯೂನ್ಯತೆಗಳು ಕಂಡುಬಂದಲ್ಲಿ ಜಿಲ್ಲಾ ಮಟ್ಟದಲ್ಲಿ ಸ್ಥಾಪಿಸಲಾಗಿರುವ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಿ, ಅತಿ ಕಡಿಮೆ ಖರ್ಚಿನಲ್ಲಿ ನ್ಯಾಯ ಪಡೆಯಬಹುದಾಗಿದೆ. ಬಳಕೆದಾರರ ಕಾನೂನುಗಳು ಜನಸಾಮಾನ್ಯರಿಗೆ ಅರ್ಥವಾಗುವ ನಿಟ್ಟಿನಲ್ಲಿ ಸರಳವಾಗಿದ್ದು, ಅನ್ಯಾಯವಾದ ಸಂದರ್ಭದಲ್ಲಿ ಗ್ರಾಹಕರು  ಶೀಘ್ರವಾಗಿ ನ್ಯಾಯ ಪಡೆಯಲು ಇದೊಂದು ಉತ್ತಮ ವೇದಿಕೆಯಾಗಿದೆ ಎಂದರು.

ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುನೀಲ ತಿ. ಮಾಸರೆಡ್ಡಿ ಮಾತನಾಡಿ, ವಸ್ತು ಹಾಗೂ ಸೇವೆಗಳನ್ನು ಪಡೆದ ಅಂತಿಮ ಬಳಕೆದಾರನು ಗ್ರಾಹಕನಾಗುತ್ತಾನೆ. ಯಾವುದೇ ವಸ್ತುಗಳನ್ನು ಖರೀದಿಸಿದಲ್ಲಿ ಅದರ ಬಿಲ್ಲು/ರಶೀದಿಗಳನ್ನು ಕನಿಷ್ಠ ಅವಧಿಯವರೆಗಾದರೂ ತಮ್ಮ ಬಳಿಯಲ್ಲಿಯೇ ಇಟ್ಟುಕೊಳ್ಳಬೇಕು. ಒಂದು ವೇಳೆ ಪ್ರತಿಫಲ ನೀಡಿ ಖರೀದಿಸಿದ ವಸ್ತುಗಳಲ್ಲಿ ದೋಷ ಕಂಡುಬಂದಾಗ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ವ್ಯಾಜ್ಯ ಹೂಡಿ ಪರಿಹಾರ ಪಡೆದುಕೊಳ್ಳಬಹುದಾಗಿದೆ ಎಂದರು.

ಪ್ರತಿಯೊಬ್ಬ ನಾಗರಿಕನು ತಮಗಿರುವ ಹಕ್ಕುಗಳ ಬಗ್ಗೆ ತಿಳಿದುಕೊಂಡಾಗ ಜಾಗೃತನಾಗುತ್ತಾನೆ. ಇಂತಹ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜುಗಳಲ್ಲಿ ಏರ್ಪಡಿಸುವುದರಿಂದ ವಿದ್ಯಾರ್ಥಿಗಳು ಮಾಹಿತಿ ಹೊಂದಿ ತಮ್ಮ ಕುಟುಂಬದವರಿಗೂ ಹಾಗೂ ಸುತ್ತಮುತ್ತಲಿನವರಿಗೂ ಕಾಯಿದೆ ಹಾಗೂ ಕಾನೂನುಗಳ ಬಗ್ಗೆ ತಿಳಿಸಲು ಹಾಗೂ ಅನ್ಯಾಯವಾಗದಿರುವಂತೆ ಎಚ್ಚರವಾಗಿರಲು ಸಹಕಾರಿಯಾಗುತ್ತದೆ ಎಂದರು.

 ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೇಶ್ ಪಿ.ಆರ್ ಮಾತನಾಡಿ, ಗ್ರಾಹಕರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯು ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲೆ ಆಶಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯೆ ಗೀತಾ ಶೇಟ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕ ರವೀಂದ್ರ, ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆಯ ಸುಜಾತಾ ಕೋರಳ್ಳಿ, ಕಾಲೇಜಿನ ಉಪನ್ಯಾಕಸರು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಬಳಕೆದಾರರ ವೇದಿಕೆಯ ವಿಶ್ವಸ್ಥ ಹರಿಕೃಷ್ಣ ಶಿವತ್ತಾಯ ಸ್ವಾಗತಿಸಿ, ನಿರೂಪಿಸಿದರೆ, ಎನ್. ರಾಮ ಭಟ್ ವಂದಿಸಿದರು.

Leave a Reply