ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಕೇಂದ್ರ ಸರ್ಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭವಿಷ್ಯನಿಧಿ ಸಂಸ್ಥೆಯು, ಉದ್ಯೋಗಿಗಳಿಗೆ ನಿವೃತ್ತಿ ನಂತರ ಆರ್ಥಿಕ ಭದ್ರತೆ ಒದಗಿಸಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಹೇಳಿದರು.
ಅವರು ಶುಕ್ರವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ಕ್ಲರ್ಕ್, ಕ್ಲರ್ಕ್ ಕಂ ಡಿಇಓ, ಕರವಸೂಲಿಗಾರ, ಪಂಪುಚಾಲಕ, ಜವಾನ, ಸ್ವಚ್ಛತಾಗಾರ ಹಾಗೂ ಗ್ರಂಥಾಲಯ ಮೇಲ್ವಿಚಾರಕರುಗಳಿಗೆ ಇ.ಎಸ್.ಐ ಮತ್ತು ಇ.ಪಿ.ಎಫ್ ಸೌಲಭ್ಯದ ಬಗ್ಗೆ ನಡೆದ ಮಾಹಿತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಪ್ರತಿಯೊಬ್ಬ ನೌಕರರಿಗೆ ಆರ್ಥಿಕ ಸೌಲಭ್ಯವನ್ನು ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಮೂಲಕ ನೆರವನ್ನು ಒದಗಿಸುತ್ತಿದೆ. ಇದರ ಲಾಭವನ್ನು ಪ್ರತಿಯೊಬ್ಬರೂ ಹೊಂದುವುದರೊಂದಿಗೆ ಆರ್ಥಿಕವಾಗಿ ಸಬಲರಾಗಬೇಕು ಎಂದರು.
ನೌಕರರ ಭವಿಷ್ಯನಿಧಿ ಯೋಜನೆಯಲ್ಲಿ ಮುಂಗಡ ಪಡೆಯುವ ನಿಯಮಗಳಲ್ಲಿ ಸಡಿಲಿಕೆ ಮಾಡಲಾಗಿದ್ದು, ಖಾತೆದಾರರ ಒಂದು ವರ್ಷದ ಸೇವೆಯ ನಂತರ ಮನೆ ನಿರ್ಮಾಣ, ಉನ್ನತ ಶಿಕ್ಷಣ, ಮದುವೆ, ಅನಾರೋಗ್ಯ ಸೇರಿದಂತೆ ಇತರೆ ಕಾರಣಗಳಿಗೆ ಮುಂಗಡ ಆರ್ಥಿಕ ಸೌಲಭ್ಯ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಉದ್ಯೋಗಿಗಳ ರಾಜ್ಯ ವಿಮೆ (ಇ.ಎಸ್.ಐ) ಯೋಜನೆಯಡಿ ಅನಾರೋಗ್ಯ, ಅಂಗವೈಕಲ್ಯ, ಸೇರಿದಂತೆ ಕಾರ್ಮಿಕರುಗಳಿಗೆ ವೈದ್ಯಕೀಯ ಮತ್ತು ಆರ್ಥಿಕ ಪ್ರಯೋಜನಗಳನ್ನು ಒದಗಿಸಲಿದೆ. ಈ ಎಲ್ಲಾ ಮಾಹಿತಿಗಳ ಬಗ್ಗೆ ಅರಿವು ಮೂಡಿಸಲು ಇ.ಎಸ್.ಐ ಹಾಗೂ ಇ.ಪಿ.ಎಫ್.ಓ ಖಾತೆದಾರರಿಗೆ ಕಾರ್ಯಾಗಾರ ಆಯೋಜಿಸಲಾಗಿದ್ದು, ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಇ.ಎಸ್.ಐ ಹಾಗೂ ಇ.ಪಿ.ಎಫ್.ಓ ಯೋಜನೆಯ ನಿಯಮಾವಳಿಗಳಲ್ಲಿ ಕಾಲಕಾಲಕ್ಕೆ ಬದಲಾವಣೆ ಆಗುತ್ತಿರುತ್ತವೆ. ಇವುಗಳಿಂದ ದೊರಕುವ ಸೌಲಭ್ಯಗಳನ್ನು ಬಳಸುವ ಬಗ್ಗೆ ಪ್ರತಿಯೊಬ್ಬ ಖಾತೆದಾರರು ಮಾಹಿತಿ ಹೊಂದಿರಬೇಕು ಎಂದ ಅವರು, ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಉಡುಪಿ ಜಿಲ್ಲೆಯಲ್ಲಿ ಇ.ಎಸ್.ಐ ಮತ್ತು ಇ.ಪಿ.ಎಫ್ ಸೌಲಭ್ಯದ ಬಗ್ಗೆ ಗ್ರಾಮ ಪಂಚಾಯತ್ ಸಿಬ್ಬಂದಿಗಳಿಗೆ ಕಾರ್ಯಾಗಾರ ಆಯೋಜಿಸಲಾಗಿದೆ ಎಂದರು.
ಮುಖ್ಯ ಯೋಜನಾಧಿಕಾರಿ ಉದಯ್ ಕುಮಾರ್ ಶೆಟ್ಟಿ ಮಾತನಾಡಿ, ಗ್ರಾಮೀಣಾಭಿವೃದ್ಧಿಯಲ್ಲಿಯೇ ಉಡುಪಿ ಜಿಲ್ಲೆ ರಾಜ್ಯದಲ್ಲಿ ಮುಂಚೂಣಿ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಗ್ರಾಮ ಪಂಚಾಯತ್ ಸಿಬ್ಬಂದಿಗಳು ಸದೃಢರಾಗಿದ್ದಾಗ ಮಾತ್ರ ಗ್ರಾಮ ಪಂಚಾಯತ್‌ಗಳು ಅಭಿವೃದ್ಧಿ ಹೊಂದಲು ಸಾಧ್ಯ. ಗ್ರಾಮ ಪಂಚಾಯತ್ ಸಿಬ್ಬಂದಿಗಳ ಒಳಿತಿಗಾಗಿ ಹಾಗೂ ಅವರುಗಳಿಗೆ ಆರ್ಥಿಕ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ ಎಂದ ಅವರು, ಗ್ರಾಮ ಪಂಚಾಯತ್ ಸಿಬ್ಬಂದಿಗಳು ಇ.ಎಸ್.ಐ ಹಾಗೂ ಇ.ಪಿ.ಎಫ್.ಓ ಯೋಜನೆಯ ಮಾಹಿತಿ ಪಡೆದಾಗ ಮಾತ್ರ ಅದರ ಲಾಭ ಸಮರ್ಪಕವಾಗಿ ದೊರಕುತ್ತದೆ ಎಂದರು.
ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್. ಎಸ್ ಕಾದ್ರೊಳ್ಳಿ ಮಾತನಾಡಿ, ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯತ್ ಸಿಬ್ಬಂದಿಗಳ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಹಾಗೂ ಅವರುಗಳಿಗೆ ಆರ್ಥಿಕ ಭದ್ರತೆ ಒದಗಿಸುವ ಯೋಜನೆಗಳ ಕುರಿತು ಅರಿವು ಮೂಡಿಸಲು ಕಾರ್ಯಾಗಾರ ಆಯೋಜಿಸಲಾಗಿದ್ದು, ಕಾರ್ಯಾಗಾರದ ಪ್ರಯೋಜನವನ್ನು ಪ್ರತಿಯೊಬ್ಬ ಸಿಬ್ಬಂದಿಯೂ ಪಡೆಯುವಂತಾಗಬೇಕು ಎಂದರು.
ಜಿಲ್ಲಾ ಇ.ಪಿ.ಎಫ್.ಓ ಎನ್‌ಫೋರ್ಸ್ಮೆಂಟ್ ಆಫೀಸರ್ ಸಂತೋಷ್ ಅವರು ಇ.ಪಿ.ಎಫ್.ಓ ಯೋಜನೆಯ ಬಗ್ಗೆ ಹಾಗೂ ಇ.ಎಸ್.ಐ ಬ್ರಾಂಚ್ ಮ್ಯಾನೇಜರ್ ಪ್ರಿಯಾಗಿ ಇ.ಎಸ್.ಐ ಸೌಲಭ್ಯದ ಕುರಿತು ಕಾರ್ಯಾಗಾರದಲ್ಲಿ ಮಾಹಿತಿ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ನಿಟ್ಟೂರು ಎನ್.ಸಿ.ಹೆಚ್.ಆರ್ ಸೊಲ್ಯೂಷನ್ಸ್ ಮಾನವ ಸಂಪನ್ಮೂಲ ಸಲಹೆಗಾರ ನವೀನ್ ಚಂದ್ರ, ಜಿಲ್ಲೆಯ ಗ್ರಾಮ ಪಂಚಾಯತ್‌ಗಳ ಕ್ಲರ್ಕ್, ಕ್ಲರ್ಕ್ ಕಂ ಡಿಇಓ, ಕರವಸೂಲಿಗಾರರು, ಪಂಪುಚಾಲಕರು, ಜವಾನರು, ಸ್ವಚ್ಛತಾಗಾರರು ಹಾಗೂ ಗ್ರಂಥಾಲಯ ಮೇಲ್ವಿಚಾರಕರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯತ್ ಮುಖ್ಯ ಲೆಕ್ಕಧಿಕಾರಿ ನಿಶ್ಚಿತ್ ಹೆಗ್ಡೆ ಸ್ವಾಗತಿಸಿ, ಪಿ.ಡಿ.ಓ ಅನಿಲ್ ಕುಮಾರ್ ಶೆಟ್ಟಿ ನಿರೂಪಿಸಿ, ರವಿರಾಜ್ ವಂದಿಸಿದರು.