ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೇಂದ್ರ ಮತ್ತು ರಾಜ್ಯ ಸರಕಾರಗಳು ಜನರ ಕಲ್ಯಾಣಕ್ಕಾಗಿ, ಒಳಿತಿಗಾಗಿ ಯೋಜನೆ, ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತದೆ. ಸರಕಾರದ ವಿಮೆ, ಪಿಂಚಣಿ ಯೋಜನೆಯಲ್ಲಿ ನೊಂದಾಯಿಸಿಕೊಂಡು ಜೀವನದ ಭದ್ರತೆ ಕಡೆಗೆ ಗಮನ ನೀಡಬೇಕು ಎಂದು ಗಂಗೊಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಹೇಳಿದರು.
ಅವರು ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಗಂಗೊಳ್ಳಿ ಶಾಖೆ ಆಶ್ರಯದಲ್ಲಿ ಗಂಗೊಳ್ಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳ ಮಾಹಿತಿ ಶಿಬಿರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ಹೊಂದಿದ ಗ್ರಾಹಕರಿಗೆ ಸರಕಾರ ಜಾರಿಗೆ ತಂದಿರುವ ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆ ಉಪಯುಕ್ತವಾಗಿದ್ದು, ಗ್ರಾಹಕರು ಈ ಯೋಜನೆಯಡಿ ನೊಂದಾಯಿಸಿಕೊಳ್ಳಬೇಕು. ಆಪತ್ಕಾಲದಲ್ಲಿ ಇದರ ಪ್ರಯೋಜನ ನಮ್ಮ ಕುಟುಂಬದ ಸದಸ್ಯರಿಗೆ ದೊರೆಯಲಿದೆ ಎಂದರು.
ಗಂಗೊಳ್ಳಿ ಗ್ರಾಪಂ ಉಪಾಧ್ಯಕ್ಷ ತಬ್ರೇಜ್, ಪಿಡಿಒ ಶೋಭಾ ಮತ್ತು ಪತ್ರಕರ್ತ ಬಿ.ರಾಘವೇಂದ್ರ ಪೈ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕುಂದಾಪುರ ತಾಲೂಕು ಕಚೇರಿಯ ಆರ್ಥಿಕ ಸಾಕ್ಷರತಾ ಕಾರ್ಯಾಲಯದ ಆಶಾಲತಾ ಅವರು ಕೇಂದ್ರ ಸರಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ ಮತ್ತು ಪಿಎಂಎಸ್‌ಬಿವೈ ಯೋಜನೆ ಹಾಗೂ ಅಟಲ್ ಪಿಂಚಣಿ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಗ್ರಾಪಂ ಸದಸ್ಯರು, ಸಿಬ್ಬಂದಿಗಳು, ಗ್ರಾಹಕರು ಹಾಗೂ ಬ್ಯಾಂಕಿನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಬ್ಯಾಂಕಿನ ಸಹಾಯಕ ವ್ಯವಸ್ಥಾಪಕ ಸುಧೀಂದ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬ್ಯಾಂಕಿನ ಸಿಬ್ಬಂದಿ ವಿಕ್ರಂ ತಗ್ಗರ್ಸೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.















