Kundapra.com ಕುಂದಾಪ್ರ ಡಾಟ್ ಕಾಂ

ಕೋಟ: ಬೀದಿ ನಾಯಿಗಳ ವಿರುದ್ಧ ಕ್ರಮ ಸೇರಿದಂತೆ ವಿವಿಧ ಬೇಡಿಕೆಗೆ ಮಕ್ಕಳ ವಿಶೇಷ ಗ್ರಾಮಸಭೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ವ್ಯಾಪ್ತಿಯಲ್ಲಿರುವ ಶಾಲೆಗಳ ಆಸುಪಾಸು ಹಾಗೂ ಗ್ರಾಮಗಳಲ್ಲಿ ಬೀದಿ ನಾಯಿಗಳ ಆವಳಿ ವಿಪರಿತವಾಗಿದೆ. ಇದರಿಂದ ಶಾಲೆಗೆ ಸಂಚರಿಸಲು ಭಯದ ವಾತಾವರಣ ನಿರ್ಮಾಣವಾಗಿದೆ. ಈ ಬಗ್ಗೆ ಗ್ರಾಮಪಂಚಾಯತ್ ಕ್ರಮ ಕೈಗೊಳ್ಳುವಂತೆ ಕೋಟದ ಮಣೂರು ಪಡುಕರೆ ಸಂಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳು ಆಗ್ರಹಿಸಿದರು.

ಬುಧವಾರ ಕೋಟ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಗ್ರಾಮಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೋಟ ಗ್ರಾಮ ಪಂಚಾಯತ್ ಬ್ರಹ್ಮಾವರ ತಾಲೂಕು ಪಂಚಾಯತ್ ನೇತೃತ್ವದಲ್ಲಿ 2025-26ನೇ ಸಾಲಿನ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ಈ ಬಗ್ಗೆ ತಮ್ಮ ಅಳಲನ್ನು ತೊಡಿಕೊಂಡರು.

ಬೀದಿನಾಯಿಗಳ ಸಂತಾನ ಹರಣ ಚಿಕಿತ್ಸೆಗಾಗಿ 1ಲಕ್ಷ ರೂ ಕಾಯ್ದಿಸಿದ್ದೇವೆ ಈ ಸಂಬಂಧಿಸಿದ ಇಲಾಖೆಯೊಂದಿಗೆ ಸಂವಹನ ನಡೆಸಲಾಗಿದೆ ಶೀಘ್ರದಲ್ಲೆ ಇದರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ. ಶೆಟ್ಟಿ ಉತ್ತರಿಸಿದರು.

ಶಾಲಾ ವ್ಯಾಪ್ತಿಯಲ್ಲಿ ಸ್ಕೂಲ್ ಝೋನ್ ಫಲಕ ಅಳವಡಿಸಿ, ವಿದ್ಯಾರ್ಥಿಗಳ ಕ್ರೀಡಾ ಸಾಧನೆಗೆ ಕಬ್ಬಡಿ ಮ್ಯಾಟ್, ಶಾಲಾ ಶೌಚಾಲಯ ಶುಚಿಗೊಳಿಸಲು ಕ್ರಮವಹಿಸಿ, ಶಾಲಾ ವ್ಯಾಪ್ತಿಯಲ್ಲಿ ಚರಂಡಿ ನಿರ್ಮಾಣ, ಮೂಡುಗಿಳಿಯಾರು ಶಾಲೆಯಲ್ಲಿ ಕುಡಿಯುವ ನೀರಿಗಾಗಿ ಬಾವಿ ರಚಿಸಿ ಎಂಬ ಗ್ರಾಮಸಭೆಯಲ್ಲಿ ವಿದ್ಯಾರ್ಥಿಗಳು ಆಗ್ರಹ ಕೇಳಿಬಂತು.

ಈ ಬಗ್ಗೆ ಪಂಚಾಯತ್ ಸಮರ್ಪಕವಾಗಿ ಕ್ರಮ ಕೈಗೊಳ್ಳುವ ಭರವಸೆಯನ್ನು ವಿದ್ಯಾರ್ಥಿಗಳಿಗೆ ನೀಡಿತು.

ಗ್ರಾಮಸಭೆಯನ್ನು ವ್ಯಾಪ್ತಿಯ ಎರಡು ಪ್ರೌಢಶಾಲಾ ವಿದ್ಯಾರ್ಥಿಗಳು ಮುನ್ನೆಡಿಸಿದ್ದು ವಿಶೇಷವಾಗಿ ಕಂಡುಬಂತು, ಮಕ್ಕಳ ಕರಾರುವಾಕ್ಕಾಗಿ ಕೇಳುವ ಪ್ರಶ್ನೆಗಳು ಗಮನ ಸೆಳೆದವು.

ಸಭೆಯಲ್ಲಿ ಮಕ್ಕಳ ರಕ್ಷಣೆಯ ಕುರಿತು ಕೋಟ ಠಾಣೆಯ ಎಎಸ್‌ಐ ರವಿ ಕುಮಾರ್ ಮಾಹಿತಿ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬ್ರಹ್ಮಾವರ ಇದರ ಮೇಲ್ವಿಚಾರಕಿ ಲಕ್ಷ್ಮೀ ಮಕ್ಕಳ ಹಕ್ಕ ಮತ್ತು ಪೋಸ್ಕೋ ಕಾಯ್ದೆ ಬಗ್ಗೆ ವಿವರವಾಗಿ ತಿಳಿಸಿದರು.

ಕೋಟ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಉಮೇಶ್ ಶಾಲಾ ದಾಖಲಾತಿ, ಪೌಷ್ಠಿಕಾಹಾರ, ಮಹಿಳಾ ಮತ್ತು ಮಕ್ಕಳ ಇಲಾಖೆಗಳ ಸವಲತ್ತು ಮಕ್ಕಳ ರಕ್ಷಣೆ, ಬಾಲಕಾರ್ಮಿಕ ಪದ್ಧತಿ, ಪೋಸ್ಕೊ ಕಾಯ್ದೆ ಜಾಗೃತಿ ಕುರಿತಾಗಿ ವಿಶೇಷ ಗ್ರಾಮಸಭೆಯನ್ನು ಆಯೋಜಿಸುತ್ತಿರುವ ಬಗ್ಗೆ ಪ್ರಾಸ್ತಾವನೆಯ ಮೂಲಕ ತಿಳಿಸಿದರು.

ಕೋಟ ಗ್ರಾಮಪಂಚಾಯತ್ ಅಧ್ಯಕ್ಷೆ ಜ್ಯೋತಿ ಬಿ. ಶೆಟ್ಟಿ ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ  ಕೋಟ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಮಾಧವ ಪೈ ಆರೋಗ್ಯ ಸಂಬಂಧಿಸಿದ ಮಾಹಿತಿ ನೀಡಿದರು.

ಇದೇ ವೇಳೆ ಮಣೂರು ಮತ್ತು ಮೂಡುಗಿಳಿಯಾರು ಪ್ರೌಢಶಾಲೆಗೆ ತಲಾ 20000ರಂತೆ  ಒಟ್ಟು 40000/ ಸಾವಿರ ದ ಕ್ರೀಡಾ ಪರಿಕರ,ಜಿಲ್ಲೆ ಹಾಗೂ ರಾಜ್ಯ ಮಟ್ಟದ ಲ್ಲಿ ಸಾಧನೆ ಮಾಡಿದ 9 ಮಕ್ಕಳಿಗೆ 1000ರೂ ನಗದು ಮತ್ತು ಪ್ರಮಾಣ ಪತ್ರ ವಿತರಿಸಿ ಸನ್ಮಾನ, 43 ಮಕ್ಕಳಿಗೆ ವಿಶೇಷ ವಾಗಿ ಗುರುತಿಸಿ ದೆ(ಕಲಿಕಾ ಕಿಟ್ ನೀಡಲಾಯಿತು.

ಉಡುಪಿ ಮಕ್ಕಳ ರಕ್ಷಣಾ ಘಟಕ ವಿಷಯ ನಿರ್ವಾಹಕಿ ರಮ್ಯ ವಿದ್ಯಾರ್ಥಿ ಮುಖಂಡರುಗಳಾದ ಸಂಜನಾ ಮೂಡುಗಿಳಿಯಾರು ಪ್ರೌಢಶಾಲೆ, ನಿಖಿತಾ ಕೋಟ ಮಣೂರು ಪಡುಕರೆ ಪ್ರೌಢಶಾಲೆ, ಪಂಚಾಯತ್ ಉಪಾಧ್ಯಕ್ಷ ಪಾಡು ಪೂಜಾರಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಮಕ್ಕಳು, ಮುಖ್ಯೋಪಾಧ್ಯಾಯರು, ಪೋಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರು, ಸಂಘ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿದರು.ಮೂಡುಗಿಳಿಯಾರು ಶಾಲಾ ವಿದ್ಯಾರ್ಥಿ ಸಾನ್ವಿ ಸ್ವಾಗತಿಸಿದರು.ಕಾರ್ಯಕ್ರಮವನ್ನು ಮಣೂರು ಶಾಲಾ ವಿದ್ಯಾರ್ಥಿ ಸಮೃದ್ಧಿ ಮೊಗವೀರ ನಿರೂಪಿಸಿದರು.

Exit mobile version