ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ಶ್ರೀ ಗುರು ನರಸಿಂಹ ದೇಗುಲದ ಜ್ಞಾನ ಮಂದಿರದಲ್ಲಿ ಜ.16ರಂದು ವಾರ್ಷಿಕ ಬ್ರಹ್ಮ ರಥೋತ್ಸವಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಿದ್ಧತಾ ಸಭೆಯನ್ನು ಅಧ್ಯಕ್ಷ ಡಾ. ಕೆ.ಎಸ್. ಕಾರಂತರ ಅಧ್ಯಕ್ಷತೆಯಲ್ಲಿ ಜರುಗಿತು.
ದೇಗುಲದ ಅಧ್ಯಕ್ಷರು ಹಬ್ಬದ ಸಿದ್ಧತೆಗೆ ಸಂಬಂಧಿಸಿದಂತೆ ಸ್ಥಳೀಯಾಡಳಿತೆಯವರ ಸಭೆಯಲ್ಲಿ ಭಾಗವಹಿಸಿದ್ದರ ಕುರಿತಂತೆ ವಿಸ್ತೃತ ಮಾಹಿತಿಯನ್ನು ಸಭೆಯ ಮುಂದಿರಿಸಿ ಕಳೆದ ನಾಲ್ಕು ವರ್ಷಗಳಲ್ಲಿ ಹಬ್ಬಕ್ಕೆ ಮುಂಚಿತವಾಗಿ ನಡೆಸುತ್ತಿರುವ ಸಿದ್ಧತಾ ಸಭೆ ಮತ್ತು ಹಬ್ಬದ ನಂತರದ ಅವಲೋಕನಾ ಸಭೆಗಳ ಉದ್ದೇಶವು ಸಾರ್ವಜನಿಕ ಸಹಕಾರದ ಮತ್ತು ಸಹಭಾಗಿತ್ವವಾಗಿದ್ದು, ವರ್ಷದಿಂದ ವರ್ಷಕ್ಕೆ ಭಕ್ತ ಸಮುದಾಯ ಮತ್ತು ವಿವಿಧ ಇಲಾಖೆ ಹಾಗು ಸಂಘ ಸಂಸ್ಥೆಗಳ ಸ್ಪಂದನೆಯ ಫಲಶ್ರುತಿಯೋ ಎಂಬಂತೆ ಇತ್ತೀಚಿನ ದಿನಗಳಲ್ಲಿ ಸಾಲಿಗ್ರಾಮ ಹಬ್ಬವು ಸ್ಥಳೀಯ ದಸರೆಯ ರೂಪವನ್ನು ಪಡೆದಿರುವುದು ಜಗದೊಡೆಯ ನರಸಿಂಹನ ಅನುಗ್ರಹವೆಂದರು.
ವೇದಿಕೆಯಲ್ಲಿ ಕಾರ್ಯದರ್ಶಿ ಲಕ್ಷ್ಮೀನಾರಾಯಣ ತುಂಗ, ಕೂಟ ಮಹಾ ಜಗತ್ತಿನ ಕೇಂದ್ರ ಸಂಸ್ಥೆಯ ಅಧ್ಯಕ್ಷ ಸತೀಶ ಹಂದೆ, ಪಟ್ಟಣ ಪಂಚಾಯತಿಯ ಪ್ರಾತಿನಿಧಿಕ ಅಧಿಕಾರಿ ಚಂದ್ರಶೇಖರ ಸೋಮಯಾಜಿ ಉಪಸ್ಥಿತರಿದ್ದರು.
ಸಲಹೆ ಸೂಚನೆ:
ಐರೋಡಿ ಶ್ರೀಪತಿ ಅಧಿಕಾರಿ, ಕೆ. ತಾರಾನಾಥ ಹೊಳ್ಳ, ಪಿ.ಸಿ. ಹೊಳ್ಳ, ಮಹಾಬಲ ಹೇರ್ಳೆ, ಅರುಣ ಉಪಾಧ್ಯ, ಅಚ್ಯುತ ಪೂಜಾರಿ, ಸಂಜೀವ ದೇವಾಡಿಗ, ಕಾರ್ಕಡ ರಾಜು ಪೂಜಾರಿ, ನಾಗರಾಜ ಗಾಣಿಗ, ರಮೇಶ ಮೆಂಡನ್ ಮುಂತಾದವರು ಸಲಹೆ ನೀಡಿ ಜನ ಸಂದಣಿಯ ನಿಯಂತ್ರಣ, ಬಿಕ್ಷುಕರ ಸಮಸ್ಯೆ, ವಾಹನ ನಿಲುಗಡೆ ವ್ಯವಸ್ಥೆ, ಪರಿಸರ ಶುಚಿತ್ವ, ಅಗ್ನಿ ವಿದ್ಯುತ್ ಮುಂತಾದ ಮೂಲದ ಸಂಭಾವ್ಯ ಅವಘಡಗಳು, ಆರೋಗ್ಯ ರಕ್ಷಣೆ, ಕಾನೂನು ಸುವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಿದರಲ್ಲದೆ ಪರಿಹಾರ ಮಾರ್ಗೋಪಾಯಗಳ ಬಗ್ಗೆ ಸಲಹೆ ಸೂಚನೆ ನೀಡಿದರು.
ಕಚೇರಿ ಪ್ರಬಂಧಕ ನಾಗರಾಜ ತಂದೆ ಅವರು ಸ್ವಾಗತಿಸಿ, ಪ್ರಬಂಧಕರ ಧನ್ಯವಾದ ಸಮರ್ಪಣೆಯ ನಂತರ ಸಾಮೂಹಿಕ ಐಕ್ಯ ಮಂತ್ರದೊಂದಿಗೆ ಸಭೆಯು ಸಂಪನ್ನಗೊಂಡಿತು.

