ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಬ್ರಹ್ಮಾವರ ತಾಲೂಕು ಘಟಕದ ಸಾಹಿತ್ಯ ಸಂಚಾರ 58ನೇ ಮಾಲಿಕೆ ಶ್ರೀ ನಾರಾಯಣ ಗುರು ವಸತಿ ಶಾಲೆ ವಡ್ಡರ್ಸೆ ಇಲ್ಲಿ ಕನ್ನಡ ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಪ್ರಾಂಶುಪಾಲರಾದ ಸವಿತಾ ನಾರಾಯಣ್ ಅವರು ಉದ್ಘಾಟಿಸಿ ಕನ್ನಡ ನಮ್ಮ ತಾಯಿ, ನಮ್ಮ ತಾಯಿಗೆ ಬೆಲೆ ಕೊಡಿ ಎಂದು ಕೇಳುವ ಕನ್ನಡಿಗರು ನಾವಾಗಬಾರದು ಎಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಪನ್ಮೂಲ ವ್ಯಕ್ತಿ ಯಕ್ಷಗಾನ ಕಲಾವಿದ ಆದಿತ್ಯ ಹೆಗಡೆ ಅವರು ಶೃತಿ ಬದ್ಧವಾದ ಮಾತು, ನಿಖರ ಪುರಾಣ ಜ್ಞಾನದೊಂದಿಗೆ ಸನ್ನಿವೇಶಕ್ಕೆ ತಕ್ಕುದಾದ ರಸ ಭಾವದೊಂದಿಗೆ ಪಾತ್ರ ಚಿತ್ರಿಸಿ ಅಭಿನಯಿಸಿ ತೋರಿಸಿದರು.

ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹಾಗೂ ಕಸಾಪ ತಾಲೂಕು ಅಧ್ಯಕ್ಷ ಗುಂಡ್ಮಿ ರಾಮಚಂದ್ರ ಐತಾಳ ಅವರು ಕವನ ಹಾಗೂ ಕಥೆಗಳನ್ನು ಬರೆಯುವ ಹಾಗೂ ಹೇಳುವ ಕ್ರಮವನ್ನು ತಿಳಿಸಿದರು.
ಭಾಗ್ಯೇಶ್ವರಿ ಮಯ್ಯ ಮತ್ತು ಶುಭ ಅಡಿಗ ಅವರು ಕನ್ನಡ ಭಾವಗೀತೆ ಹಾಗೂ ಜಾನಪದ ಗೀತೆಯನ್ನು ಹಾಡಿ ಅಭಿನಯಿಸಿ ಮಕ್ಕಳಿಗೆ ಸಾಹಿತ್ಯ ಆಸಕ್ತಿಯನ್ನು ಮೂಡಿಸಿದರು.
ಅಚ್ಯುತ ಪೂಜಾರಿ ಹಳೆಯ ಕನ್ನಡ ಗೀತೆಗಳನ್ನು ಹಾಡಿ ರಂಜಿಸಿದರು. ಅಧ್ಯಾಪಕ ಪ್ರವೀಣ್ ಅವರು ಸಾಹಿತ್ಯ ಎಂದರೆ ಭಾವನೆಗಳನ್ನು, ಸೃಜನಶೀಲತೆಯನ್ನು, ಪಾಂಡಿತ್ಯವನ್ನು ಕೊಡುವ ಪ್ರಬಲ ಮಾಧ್ಯಮ ಎನ್ನುತ್ತಾ ಕನ್ನಡ ಸಾಹಿತ್ಯ ಪರಿಷತ್ ಬ್ರಹ್ಮಾವರ ಘಟಕದವರು ಪ್ರತಿ ಶಾಲೆ ಕಾಲೇಜುಗಳಿಗೆ ಹೋಗಿ ಸಾಹಿತ್ಯ ಪ್ರೇರಣೆ ನೀಡುತ್ತಿರುವುದನ್ನು ಮೆಚ್ಚಿಕೊಂಡು ಸಂಪನ್ಮೂಲ ವ್ಯಕ್ತಿಗಳಿಗೆ ಧನ್ಯವಾದ ನೀಡಿದರು.