ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸೇವೆಯಲ್ಲಿ ಪ್ರಾಮಾಣಿಕತೆ ಜನಸ್ನೇಹಿಯಾದರೆ ಅದೇ ನಿಜವಾದ ಭಗವಂತನ ಸೇವೆ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ. ಅನಂತಪದ್ಮನಾಭ ಐತಾಳ್ ಹೇಳಿದರು.
ಅವರು ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಇತ್ತೀಚಿಗೆ ಕೋಟ ಕರ್ಣಾಟಕ ಬ್ಯಾಂಕ್‌ನಿಂದ ಬಡ್ತಿಹೊಂದಿ ಹಾಸನ ಜಿಲ್ಲೆಗೆ ವರ್ಗಾವಣೆಗೊಂಡ ಪಂಚವರ್ಣದ ಸದಸ್ಯ ನಾಗೇಶ್ ಮಯ್ಯ ಮಣೂರು ಅವರಿಗೆ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.

ಯಾವುದೇ ಸಂಸ್ಥೆಯಲ್ಲಿ ಸೇವೆ ಸಲ್ಲಿಸಲಿ ಆದರೆ ಆ ಸಂಸ್ಥೆಯ ಕಾರ್ಯವೈಕರಿ ಜನಸಾಮಾನ್ಯರ ಮನಸ್ಸನ್ನು ಗೆಲುವುದೇ ನಿಜವಾದ ಸೇವೆಯ ಅರ್ಥ, ನಾಗೇಶ್ ಮಯ್ಯರು ಅದೇ ರೀತಿಯಲ್ಲಿ ಕೋಟ ಕರ್ಣಾಟಕ ಬ್ಯಾಂಕ್‌ನಲ್ಲಿ ಜನಮಾನಸದಲ್ಲಿ ಅಚ್ಚಳಿಯದೆ ಉಳಿದುಕೊಂಡಿದ್ದಾರೆ. ಇಂತಹ ಸಿಬ್ಬಂದಿಗಳು ಪ್ರತಿಯೊಂದು ಕ್ಷೇತ್ರದಲ್ಲಿ ಇದ್ದರೆ ಆ ಕ್ಷೇತ್ರಗಳು ಅಭಿವೃದ್ಧಿಗೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಅವರು ಪಂಚವರ್ಣದ ಸದಸ್ಯರೆಂಬುದನ್ನು ಸೇವೆಯ ಮೂಲಕ ಸಾಬೀತುಪಡಿಸಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಗಣ್ಯರು ನಾಗೇಶ್ ಮಯ್ಯರನ್ನು ಅಭಿನಂದಿಸಿ ಬಿಳ್ಕೋಡುಗೆ ನೀಡಿದರು.
ವೇದಿಕೆಯಲ್ಲಿ ಕೋಟದ ಸಕಡ್ ಫೌಂಡೇಶನ್ ಪ್ರವರ್ತಕ ಶ್ರೀಕಾಂತ್ ಶೆಣೈ, ಕೋಟ ಕರ್ಣಾಟಕ ಬ್ಯಾಂಕ್ ಪ್ರಭಂಧಕ ಗುರುರಾಜ್ ಸರಳಾಯ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಕೆ. ಮನೋಹರ್ ಪೂಜಾರಿ, ಸಂಚಾಲಕ ಅಮೃತ್ ಜೋಗಿ, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ ಉಪಸ್ಥಿತರಿದ್ದರು.
ಮಹಿಳಾ ಮಂಡಲದ ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್ ಸ್ವಾಗತಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿ, ಸಲಹಾ ಸಮಿತಿಯ ರವೀಂದ್ರ ಕೋಟ ವಂದಿಸಿ ಸಂಯೋಜಿಸಿದರು.