ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ನಮ್ಮ ಪೂರ್ವಜರು ಕಲಿಸಿಕೊಟ್ಟ ಸಂಸ್ಕಾರ ಭರಿಯ ಶಿಕ್ಷಣವನ್ನು ನಾವುಗಳು ಮರೆತಿದ್ದೇವೆ ಆದರೆ ಅದರಿಂದ ಇಂದು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ ಎಂಬ ಮನಸ್ಥಿತಿಯಲ್ಲಿರುವಾಗ ಸೇವಾಸಂಗಮ ಶಿಶು ಮಂದಿರ ಶಿಕ್ಷಣ ಕೇಂದ್ರ ಸಂಸ್ಕಾರಭರಿತ ಶಿಕ್ಷಣಕ್ಕೆ ವೇದಿಕೆ ಕಲ್ಪಿಸಿಕೊಟ್ಟಿದೆ ಎಂದು ಮುಂಬೈ ಓಎನ್‌ಜಿಸಿ ನಿವೃತ್ತ ಅಧಿಕಾರಿ ಬನ್ನಾಡಿ ನಾರಾಯಣ ಆಚಾರ್ ಹೇಳಿದರು.
ಅವರು ಅಮೃತೇಶ್ವರೀ ದೇಗುಲದ ಸಭಾಂಗಣದಲ್ಲಿ ಕೋಟದ ಸೇವಾಸಂಗಮ ಶಿಶು ಮಂದಿರ ಇದರ 39ನೇ ವರ್ಷದ ವಾರ್ಷಿಕೋತ್ಸವದಲ್ಲಿ ಮಾತನಾಡಿದರು. ಪೋಷಕರು ಮಕ್ಕಳಿಗೆ ನೈಜ ಕಲಿಕಾ ಶಿಕ್ಷಣ ನೀಡಲು ಹೆಚ್ಚಿನ ಆದ್ಯತೆ ನೀಡಬೇಕು ಅಲ್ಲದೆ ಶಿಶುಮಂದಿರದಲ್ಲಿ ನೀಡುವ ಶಿಕ್ಷಣ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಹಿಂದೆ ಶಿಶುಮಂದಿರದಲ್ಲಿ ಕಲಿತ ಬಾಲಗೋಕುಲದ ಸಾಧಕ ವಿದ್ಯಾರ್ಧಿಗಳನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟ ಸೇವಾಸಂಗಮ ಶಿಶು ಮಂದಿರದ ಅಧ್ಯಕ್ಷ ಶ್ರೀಕಾಂತ್ ಶೆಣೈ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಕುಂದಾಪುರ ಸೇವಾಸಂಗಮ ಶಿಶುಮಂದಿರದ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಸುಬ್ರಹ್ಮಣ್ಯ ಹೊಳ್ಳ, ಕುಂದಾಪುರ ಟಿ.ಎನ್. ಪ್ರಭು ಲೆಕ್ಕಪರಿಶೋಧಕ ಸಂಸ್ಥೆಯ ಮುಖ್ಯಸ್ಥೆ ನರ್ಮದ ಪ್ರಭು, ಸೇವಾಸಂಗಮ ಶಿಶುಮಂದಿರ ಉಪಾಧ್ಯಕ್ಷ ಗೀತಾ ಎ. ಕುಂದರ್ ಉಪಸ್ಥಿತರಿದ್ದರು.
ಶಿಶುಮಂದಿರದ ವ್ಯವಸ್ಥಾಪಕಿ ಭಾಗ್ಯವಾದಿರಾಜ್ ಸ್ವಾಗತಿಸಿ, ಪ್ರಾಸ್ತಾವನೆ ಸಲ್ಲಿಸಿದರು. ಕಾರ್ಯಕ್ರಮವನ್ನು ಶಿಶುಮಂದಿರದ ಜತೆಕಾರ್ಯದರ್ಶಿ ಕಲಾವತಿ ಅಶೋಕ್ ನಿರೂಪಿಸಿದರು. ಕಾರ್ಯದರ್ಶಿ ಸುಷ್ಮಾ ದಯಾನಂದ ಹೊಳ್ಳ ವಂದಿಸಿದರು. ನಂತರ ಶಿಶುಮಂದಿರದ ಪುಟಾಣಿಗಳಿಂದ ನೃತ್ಯ ವೈವಿದ್ಯ ಜರಗಿತು.