ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಲಿಯುಗದ ಕಾರಣಿಕ ದೈವಾದ ಕೊರಗಜ್ಜ ದೈವವು ಒಂದಲ್ಲ ಒಂದು ರೀತಿಯ ಪವಾಡಗೈಯುವ ದೈವವಾಗಿ ಭಕ್ತರನ್ನು ಸಲಹುತ್ತಿದ್ದಾನೆ, ಅಂತಯೇ ಇಲ್ಲಿನ ಪಾಂಡೇಶ್ವರದ ಕಳಿಬೈಲು ಕೊರಗಜ್ಜನ ಸನ್ನಿಧಾನ ಮತ್ತೊಮ್ಮೆ ತನ್ನ ಮಹಿಮೆಯನ್ನು ಸಾಕ್ಷೀಕರಿಸಿದ್ದಾನೆ.
ಕಳೆದು ಹೋದ ಚಿನ್ನದ ಬಳೆ, ದೈವ ನುಡಿಯಂತೆ ನಿರ್ದಿಷ್ಟ ಅವಧಿಯೊಳಗೆ ಮಾಲೀಕೆಯ ಕೈ ಸೇರಿರುವ ಘಟನೆ ಭಕ್ತರ ಮನಗಳಲ್ಲಿ ಅಪಾರ ಭಕ್ತಿ ಭಾವವನ್ನು ಮೂಡಿಸಿದೆ.

ಬ್ರಹ್ಮಾವರ ನಿವಾಸಿ ಹಾಗೂ ಕೋಟದ ಸರ್ಕಾರಿ ಶಾಲೆಯ ಶಿಕ್ಷಕಿ ಸುಮಾ ಅವರು ಜನವರಿ 13ರಂದು ಎಂದಿನಂತೆ ತಮ್ಮ ಬೈಸಿಕಲ್‌ನಲ್ಲಿ ಬ್ರಹ್ಮಾವರದಿಂದ ಕೋಟಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಮಾಬುಕಳ ಸೇತುವೆ ಸಮೀಪ ಅವರ ಕೈಯಲ್ಲಿದ್ದ ಸುಮಾರು 12.5 ಗ್ರಾಂ ತೂಕದ (ಅಂದಾಜು 1,80,000 ಮೌಲ್ಯದ) ಚಿನ್ನದ ಬಳೆ ತಿಳಿಯದೆ ಕೈಯಿಂದ ಬಿದ್ದು ಹೋಗಿತ್ತು.
ಕೋಟ ತಲುಪಿದ ನಂತರ ಬಳೆ ಕಳೆದುಹೋದ ಸಂಗತಿ ತಿಳಿದು ಅವರು ಆತಂಕಗೊಂಡರು. ತಕ್ಷಣವೇ ಹಿಂದಿರುಗಿ ಬ್ರಹ್ಮಾವರದವರೆಗೆ ಹುಡುಕಾಟ ನಡೆಸಿದರೂ ಬಳೆ ಪತ್ತೆಯಾಗಲಿಲ್ಲ. ಬಳಿಕ ಕೋಟ ಪೊಲೀಸ್ ಠಾಣೆಗೆ ದೂರು ನೀಡಿದರು. ಕೋಟ ಹಾಗೂ ಬ್ರಹ್ಮಾವರ ಪೊಲೀಸರು ಹೆದ್ದಾರಿಯ ಸಿಸಿ ಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಯಾವುದೇ ಸುಳಿವು ದೊರೆಯಲಿಲ್ಲ. ಹೀಗಾಗಿ ಬಳೆ ಮರಳಿ ಸಿಗುವ ನಿರೀಕ್ಷೆ ಕ್ಷೀಣಿಸಿತು.
ಇದಾದ ನಂತರ, ಭಕ್ತರಿಂದ ಕೇಳಿಬಂದ ಕೊರಗಜ್ಜನ ಪವಾಡಗಳ ಕುರಿತ ಮಾಹಿತಿ ಸುಮಾ ಅವರು ಸಾಸ್ತಾನ ಕೆಳಬೆಟ್ಟು ಮೂಡಹಡು ನೆಲೆನಿಂತ ಕಳಿಬೈಲು ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ನೀಡಿ ದೈವದಲ್ಲಿ ಪ್ರಾರ್ಥನೆ ಸಲ್ಲಿಸಿದರು.
ಅಲ್ಲಿ ಕಳಿಬೈಲು ಸ್ವಾಮೀ ಕೊರಗಜ್ಜ ಸೇವಾ ಸಮಿತಿ ಪ್ರಧಾನ ಅರ್ಚಕರಾದ ಅಭಿಜಿತ್ ಪಾಂಡೇಶ್ವರ ಅವರು ಪ್ರಶ್ನೆ ನೋಡಿ ದೈವ ನುಡಿಯಂತೆ, ಚಿನ್ನದ ಬಗ್ಗೆ ಚಿಂತಿಸಬೇಡಿ. ಅಜ್ಜನಲ್ಲಿ ನಂಬಿಕೆ ಇಡಿ. ನಿಮ್ಮ ಚಿನ್ನ ಒಬ್ಬ ವ್ಯಕ್ತಿಗೆ ಸಿಕ್ಕಿದ್ದು, 80 ದಿನದೊಳಗೆ ನಿಮ್ಮ ಕೈ ಸೇರುತ್ತದೆ ಎಂದು ಅಭಯವಚನ ನೀಡಿದರು. ಚಿನ್ನ ಮರಳಿದರೆ ಸೇವೆ ಸಲ್ಲಿಸುವಂತೆ ಬೇಡಿಕೊಳ್ಳಲು ಸೂಚಿಸಿ ಪ್ರಸಾದ ನೀಡಿದರು.
ದೈವ ನುಡಿಯಂತೆ ಅಂದು, ಬನ್ನಾಡಿ ನಿವಾಸಿ ಪ್ರವೀಣ್ ಅವರು ಉಡುಪಿಯಿಂದ ಕೋಟಕ್ಕೆ ಬೈಕ್‌ನಲ್ಲಿ ಬರುತ್ತಿದ್ದಾಗ ಅವರ ಮೊಬೈಲ್ ಫೋನ್ ಮಾಬುಕಳ ಸೇತುವೆ ಬಳಿ ಬಿದ್ದಿತ್ತು. ಅದನ್ನು ಎತ್ತಿಕೊಳ್ಳುವ ವೇಳೆ ರಸ್ತೆಬದಿಯ ಮಣ್ಣಿನಲ್ಲಿ ಬಿದ್ದಿದ್ದ ಚಿನ್ನದ ಬಳೆ ಗಮನಕ್ಕೆ ಬಂದು, ಅದನ್ನು ಮನೆಗೆ ಸುರಕ್ಷಿತವಾಗಿ ತೆಗೆದುಕೊಂಡು ಹೋಗಿದ್ದರು. ತುರ್ತು ಕೆಲಸದ ನಿಮಿತ್ತ ಅವರು ನಂತರ ಬೆಂಗಳೂರಿಗೆ ತೆರಳಿದ್ದರು .ನಂತರ ಕೋಟ ಠಾಣೆಯ ಮೂಲಕ ಚಿನ್ನವನ್ನು ಹಸ್ತಾಂತರಿಸಿಕೊಂಡರು. ಒಟ್ಟಿನಲ್ಲಿ ಕೊರಗಜ್ಜನ ಪವಾಡ ಪದೆ ಪದೆ ನಡೆಯುತ್ತಿದ್ದು ಭಕ್ತ ಸಮುದಾಯದಲ್ಲಿ ಆಶಾಭಾವನೆ ಮನೆ ಮಾಡಿದೆ ಎಂದರೆ ಅತಿಶೋಕ್ತಿಯಲ್ಲ.