ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಜನಸಂಖ್ಯಾ ಬಹಳವಿರುವ ನಮ್ಮ ದೇಶದಲ್ಲಿ ಯುವಶಕ್ತಿ ಹೇರಳವಾಗಿದ್ದು ಅದನ್ನು ದೇಶದ ಉತ್ಪಾದಕ ಶಕ್ತಿಯನ್ನಾಗಿ ಪರಿವರ್ತಿಸುವ ಉದ್ದೇಶಕ್ಕಾಗಿ ಕರ್ನಾಟಕ ಸರ್ಕಾರ ತನ್ನ ಪಂಚ ಗ್ಯಾರಂಟಿ ಕಾರ್ಯಕ್ರಮಗಳಲ್ಲಿ ಯುವನಿಧಿ ಯೋಜನೆಯನ್ನು ಹಮ್ಮಿಕೊಂಡಿದೆ ಎಂದು ಉದ್ಯೋಗ ವಿನಿಮಯ ಕಚೇರಿಯ ಸಿಬ್ಬಂದಿ ಲತಾ ನುಡಿದರು.
ಅವರು ಇತ್ತೀಚಿಗೆ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟಪಡುಕರೆ ಮತ್ತು ಉಡುಪಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಮತ್ತು ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ವತಿಯಿಂದ ಕಾರ್ಯಾಗಾರದಲ್ಲಿ ಮಾತನಾಡಿದರು. ಈ ಯುವ ನಿಧಿ ಯೋಜನೆಯ ನೋಂದಣಿ ಮಾಡಿಕೊಂಡು ಯುವಕರಿಗೆ ಕೌಶಲ್ಯ ತರಬೇತಿ ನೀಡುವುದರೊಂದಿಗೆ, ಅವರಿಗೆ ನಿರುದ್ಯೋಗಿಗಳಾಗಿರುವ ಅವಧಿಗೆ ಯುವನಿಧಿ ಪ್ರೋತ್ಸಾಹ ಧನ ನೀಡಿ, ಮುಂದೆ ಉದ್ಯೋಗ ಪಡೆಯಲು ಸಹಕರಿಸುವ ಉದ್ದೇಶ ಇಟ್ಟುಕೊಳ್ಳಲಾಗಿದೆ ಎಂದು ಅದರ ಕುರಿತು ಸಮಗ್ರ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ್ ಆಚಾರ್ ಅವರು ವಿದ್ಯಾರ್ಥಿಗಳಿಗೆ ಆಧುನಿಕ ಜಗತ್ತಿನ ಸ್ಪರ್ಧೆಯನ್ನು ಹೇಗೆ ಎದುರಿಸಬೇಕು ಮತ್ತು ಉದ್ಯೋಗ ಪಡೆದು ಸಮಾಜದ ಮುಖ್ಯವಾಗಿ ವಾಹಿನಿಗೆ ಹೋಗಬೇಕೆಂಬ ಬಗ್ಗೆ ಮಾಹಿತಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಂಚ ಗ್ಯಾರಂಟಿಗಳ ಯೋಜನಾ ಸಮಿತಿಯ ಸದಸ್ಯರಾದ ಸುರೇಶ ಪೂಜಾರಿ, ರೇಖಾ ಸುವರ್ಣ, ಸುಧಾಕರ್ ಶೆಟ್ಟಿ ಹಾಗೂ ಕಾಲೇಜಿನ ಐಕ್ಯೂಎಸಿ ಸಂಚಾಲಕರಾದ ಪ್ರೊ. ಸುಬ್ರಹ್ಮಣ್ಯ ಉಪಸ್ಥಿತರಿದ್ದರು. ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರಾಮಚಂದ್ರ ಭಟ್ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.