ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಹಿಳೆ ಇಂದು ಸರ್ವಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾಳೆ ಅಲ್ಲದೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸ್ತ್ರೀ ಮಾನ್ಯತೆಯ ಸಮಾಜದ ಕೊಡುಗೆ ಅನನ್ಯ ಎಂದು ಉಪನ್ಯಾಸಕಿ, ಸಾಹಿತಿ ಪಾರ್ವತಿ ಐತಾಳ್ ಹೇಳಿದರು.
ಅವರು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಸಭಾಂಗಣದಲ್ಲಿ ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಇವರ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳೆ ಮನೆಯ ಗಂಭೀರ ವಾತಾವರಣದಲ್ಲೂ ಹೊರ ಸಮಾಜದೊಂದಿಗೆ ಗುರುತಿಸಿಕೊಂಡಿದ್ದಾಳೆ. ಎಷ್ಟೆ ಸಂಕಷ್ಟದ ಸಮಯದಲ್ಲೂ ತಾನೇ ಹೊರೆ ಹೊತ್ತು ಸಂಸಾರವನ್ನು ಮುನ್ನೆಡೆಸುತ್ತಿದ್ದಾಳೆ. ಅಂತಹ ಮಹಿಳೆ ಸಮಾಜಕಟ್ಟುವ ಕಾಯಕಕ್ಕೂ ಸೈ ಎಸಿಕೊಂಡಿದ್ದಾಳೆ ಎಂದರು.

ಈ ವೇಳೆ ಸಾಧಕ ಮಹಿಳೆ ಕೆ.ಎಂ.ಎಫ್ ಮಾಜಿ ನಿರ್ದೇಶಕಿ ಜಾನಕಿ ಹಂದೆ ಅವರನ್ನು ಗುರುತಿಸಿ ಗೌರವಿಸಲಾಯಿತು. ವಿಶೇಷವಾಗಿ ಮಹಾಲಿಂಗೇಶ್ವರ ವಿಪ್ರ ಮಹಿಳಾ ಭಜನಾ ಸಂಘವನ್ನು ಸನ್ಮಾನಿಸಲಾಯಿತು.
ದೇಗುಲದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಡಾ. ಕೆ.ಎಸ್. ಕಾರಂತ್ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ಸಭೆಯ ಅಧ್ಯಕ್ಷತೆ ವಿಪ್ರ ಮಹಿಳಾ ವಲಯ ಸಾಲಿಗ್ರಾಮ ಅಧ್ಯಕ್ಷೆ ವನಿತಾ ಉಪಾಧ್ಯಾ ವಹಿಸಿದ್ದರು.
ಮುಖ್ಯ ಅಭ್ಯಾಗತರಾಗಿ ಸಾಲಿಗ್ರಾಮ ದೇಗುಲದ ಆಡಳಿತ ಮಂಡಳಿಯ ಸದಸ್ಯ ಕೆ.ಅನಂತಪದ್ಮನಾಭ ಐತಾಳ್, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಟ್ಟಾಭಿರಾಮಚಂದ್ರ ಭಟ್, ವಿಪ್ರಮಹಿಳಾ ವಲಯ ಸಾಲಿಗ್ರಾಮ ಇದರ ಗೌರವಾಧ್ಯಕ್ಷೆ ಜ್ಞಾಹ್ನವಿ ಹೇರ್ಳೆ ಉಪಸ್ಥಿತರಿದ್ದರು.
ವಲಯದ ಸದಸ್ಯೆ ಪೂರ್ಣಿಮಾ ಅಧಿಕಾರಿ ನಿರೂಪಿಸಿ, ಭಾರತಿ ಮಯ್ಯ ವಂದಿಸಿದರು. ಕಾರ್ಯದರ್ಶಿ ಸ್ಮೀತಾರಾಣಿ ವರದಿ ವಾಚಿದಿದರು. ಲೆಕ್ಕಪತ್ರವನ್ನು ಕೋಶಾಧಿಕಾರಿ ಸುಜಾತ ಬಾಯರಿ ವಾಚಿಸಿದರು. ಗೀತಾ ಭಟ್, ಜ್ಯೋತಿ ಕೇದ್ಲಾಯ ಸನ್ಮಾನಪತ್ರ ವಾಚಿಸಿದರು.