ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ಯಕ್ಷಮಿತ್ರರು ನೀಡಿದ ಸನ್ಮಾನ ಅರ್ಥಪೂರ್ಣ ಎಂದು ಪಾಂಡೇಶ್ವರ ರಕ್ತೇಶ್ವರಿ ದೇಗುಲದ ಧರ್ಮದರ್ಶಿ ಕೆ.ವಿ. ರಮೇಶ್ ರಾವ್ ಹೇಳಿದರು.
ಅವರು ಶನಿವಾರ ಸಾಸ್ತಾನದ ಪಾಂಡೇಶ್ವರ ಯಡಬೆಟ್ಟು ಯಕ್ಷಮಿತ್ರರು ಆಯೋಜಿಸಿದ ಪಂಚಮ ವರ್ಷದ ಯಕ್ಷಗಾನ ಕಾರ್ಯಕ್ರಮದಲ್ಲಿ ಪದ್ಮಶ್ರೀ ಹರೇಕಳ ಹಾಜಬ್ಬರನ್ನು ಗೌರವಿಸಿ ಮಾತನಾಡಿದರು. ಅಕ್ಷರ ದೇಗುಲವನ್ನು ಕಟ್ಟಿ ಸಮಾಜಕ್ಕೆ ತನ್ನನ್ನು ಸಮರ್ಪಿಸಿಕೊಂಡ ಹಾಜಬ್ಬ ಎನ್ನುವ ನಿಸ್ವಾರ್ಥ ಸೇವಾರ್ಥಿ ತನ್ನ ಸರ್ವಸ್ವವನ್ನೂ ಈ ಸಮಾಜಕ್ಕೆ ಧಾರೆ ಎರೆದಿದ್ದಾರೆ ಇದು ಯಕ್ಷ ಮಿತ್ರರ ಹೆಸರನ್ನು ಇಮ್ಮಡಿಗೊಳಿಸಿದೆ ಎಂದರು.

ಈ ಸಂದರ್ಭದಲ್ಲಿ ಅಕ್ಷರ ಸಂತ ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಯಕ್ಷಮಿತ್ರ ಗೌರವ ಸನ್ಮಾನ ನೀಡಲಾಯಿತು.
ಸಭೆಯಲ್ಲಿ ಪಾಂಡೇಶ್ವರ ಕಳಿಬೈಲು ಶ್ರೀ ಕ್ಷೇತ್ರದ ಧರ್ಮದರ್ಶಿ ಅಭಿಜಿತ್ ಪಾಂಡೇಶ್ವರ, ಸಾಸ್ತಾನ ಗೋಳಿಗರಡಿ ದೈವಸ್ಥಾನದ ಪಾತ್ರಿ ಶಂಕರ್ ಪೂಜಾರಿ, ಯಕ್ಷ ಮಿತ್ರರ ಬಳಗದ ಕರಿಯ ದೇವಾಡಿಗ, ಅಣ್ಣಯ್ಯ ದೇವಾಡಿಗ ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮೊದಲು ಸಾಸ್ತಾನ ಗೋಳಿಗರಡಿ ದೈವಸ್ಥಾನದಿಂದ ಅದ್ಧೂರಿಯ ಚಂಡೆ, ಕೀಲು ಕುದುರೆ, ಕುಣಿತ ಭಜನೆಯೊಂದಿಗೆ ಮೆರವಣಿಗೆ ಮೂಲಕ ದೇವರ ಪಟ್ಟಿಗೆಯನ್ನು ಕಾರ್ಯಕ್ರಮ ನಡೆಯುವ ಸ್ಥಳದವರೆಗೆ ಕರೆತರಲಾಯಿತು. ಶ್ರೀ ಆದು ಧೂಮಾವತಿ ಶ್ರೀದೇವಿ ಬೈದೇತಿ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಪ್ರದರ್ಶನಗೊಂಡಿತು.
ಕಾರ್ಯಕ್ರಮವನ್ನು ಶ್ರೀಶಾ ಪಾಂಡೇಶ್ವರ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ನಾಗೇಶ್ ಯಡಬೆಟ್ಟು ಸಹಕರಿಸಿದರು.