ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಸಮಸ್ಯೆ ಕಟ್ಟಿಟ್ಟ ಬುತ್ತಿ ಅದರ ಬಗ್ಗೆ ಕಾಳಜಿ ಅತ್ಯಗತ್ಯ ಎಂದು ಉಡುಪಿ ಪ್ರಸಿದ್ಧ ವೈದ್ಯ ನರೇಂದ್ರ ಕುಮಾರ್ ಎಚ್. ಎಸ್. ಹೇಳಿದರು.
ಅವರು ಭಾನುವಾರ ಕೋಡಿ ಕನ್ಯಾಣದ ಸೇತುವೆ ಬಳಿ ಕೆನರಾ ಬ್ಯಾಂಕ್ ಮಣಿಪಾಲ ವೃತ್ತ ಪ್ರಾಯೋಜಕತ್ವದಲ್ಲಿ ಸೀಎಂಸಿ2 ಮಂಗಳೂರು, ಉಡುಪಿ ಕಿನಾರ ಮೀನುಗಾರ ಉತ್ಪಾದಕ ಕಂಪನಿ, ಅಯೋಧ್ಯಾ ಫ್ರೆಂಡ್ಸ್ ಕೋಡಿ ಕನ್ಯಾಣ ಇವರ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ಗ್ರಾಮೀಣ ಕರಾವಳಿ ಭಾಗದಲ್ಲಿ ಮೀನುಗಾರ ವೃತ್ತಿ ನಿರಂತರ ಹೆಚ್ಚಿದ್ದು ಅವರ ಆರೋಗ್ಯದ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು. ಮೂಳೆ ಸವೆತ ಸೇರಿದಂತೆ ಅನೇಕ ರೋಗಗಳನ್ನು ಅವರು ಎದುರಿಸುತ್ತಾರೆ. ಅಂತಹ ಸಂದರ್ಭದಲ್ಲಿ ಇಂತಹ ಆರೋಗ್ಯ ಶಿಬಿರಗಳು ಸಹಕಾರಿಯಾಗಿ ಕಾರ್ಯನಿರ್ವಹಿಸುತ್ತವೆ ಎಂದರು.

ಕಾರ್ಯಕ್ರಮವನ್ನು ಕೆನರಾ ಬ್ಯಾಂಕ್ ಮಣಿಪಾಲ ಇದರ ಹಿರಿಯ ಪ್ರಭಂಧಕಿ ಅನಿತಾ ಶೆಟ್ಟಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೀಎಂಸಿ2 ಮಂಗಳೂರು ಇದರ ಅಧ್ಯಕ್ಷ ರಮೇಶ್ ಎಂ.ಆರ್. ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಚರ್ಮರೋಗ ತಜ್ಞೆ ಡಾ. ಮಿಶೆಲ್ ಫರ್ನಾಂಡಿಸ್, ಮಂಗಳೂರಿನ ವೈದ್ಯೆ ಡಾ. ಸ್ಪೂರ್ತಿ, ಅಯೋಧ್ಯಾ ಫ್ರೆಂಡ್ಸ್‌ನ ಸುದಿನಾ ಕೋಡಿ, ಕೋಟದ ತೋಳಾರ್ ಓಷಿಯನ್ ಪ್ರಾಡಕ್ಟ್ ಮ್ಯಾನೇಜರ್ ಯೋಗೀಶ್ ಕುಮಾರ್, ಸೀಎಂಸಿ2 ಮಂಗಳೂರು ಕಾರ್ಯದರ್ಶಿ ಡಾ. ಸೋಮಶೇಖರ್ ಎಸ್.ಆರ್. ಉಪಸ್ಥಿತರಿದ್ದರು.
ಸೀಎಂಸಿ2 ಇದರ ಮಹಾನಿರ್ದೇಶಕ ಡಾ. ಶಿವಕುಮಾರ್ ಮಗದ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮವನ್ನು ಉಪನ್ಯಾಸಕಿ ಶೀತಲ್ ನಿರೂಪಿಸಿದರು. ಸಂತೋಷ್ ಮೆಂಡನ್ ಸಹಕರಿಸಿದರು. ಕಾರ್ಯಕ್ರಮದಲ್ಲಿ ಚರ್ಮ ಮತ್ತು ಕೀಲು ರೋಗ ಸಮಾಲೋಚನೆ ಪರಿಹಾರ ಕ್ರಮಗಳು, ಕರಾವಳಿ ಮೀನು ಕೃಷಿ ಅವಕಾಶಗಳ ಬಗ್ಗೆ ಮಾಹಿತಿ, ಪ್ರಧಾನಮಂತ್ರಿ ಕಿಸಾನ್ ಸಮೃದ್ಧಿ ಯೋಜನೆಗಳ ಬಗ್ಗೆ ಮಾಹಿತಿ, ಹಣಕಾಸು ಸಾಕ್ಷರತೆ ಮತ್ತು ಜೀವ ವಿಮೆಗಖ ಬಗ್ಗೆ ಮಾಹಿತಿ ನಡೆಯಿತು.