Kundapra.com ಕುಂದಾಪ್ರ ಡಾಟ್ ಕಾಂ

ಮಹಿಳೆಯನ್ನು ಗೌರವಿಸುವುದು ಸಮಾಜವನ್ನು ಗೌರವಿಸಿದಂತೆ: ಉದ್ಯಮಿ ಆನಂದ ಸಿ. ಕುಂದರ್

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಸಮಾಜದ ಬೇರೆ ಬೇರೆ ಸ್ತರಗಳಲ್ಲಿ ತಮ್ಮದೇ ಕೊಡುಗೆಯನ್ನು ನೀಡಿರುವ ಮಹಿಳೆಯರು ದೇಶದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ಅವರನ್ನು ಗೌರವಿಸಿದರೆ ಸಮಾಜವನ್ನೇ ಗೌರವಿಸಿದಂತೆ. ಆಕೆ ತಾಯಿಯಾಗಿ, ಮಡದಿಯಾಗಿ ಗೆಳತಿಯಾಗಿ ಬೇರೆ ಬೇರೆ ಹುದ್ದೆಗಳನ್ನು ನಿರ್ವಹಿಸಿದಂತ ಕರ್ತವ್ಯ ಶ್ಲಾಘನೀಯವಾದದ್ದು ಎಂದು ಉದ್ಯಮಿ ಆನಂದ ಸಿ. ಕುಂದರ್ ನುಡಿದರು.

ಅವರು ಇತ್ತೀಚಿಗೆ ಕೋಟದ ಕಾರಂತ ಥೀಂ ಪಾರ್ಕ್‌ನಲ್ಲಿ ಡಾ. ಶಿವರಾಮ ಕಾರಂತ ಪ್ರತಿಷ್ಠಾನ ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಅಮೃತೇಶ್ವರಿ ಮಹಿಳಾ ಮೀನುಗಾರರ ಸಹಕಾರಿ ಸಂಘ ಕೋಟ, ನೆನಪು ಮೂವೀಸ್ ಮತ್ತು ಉಸಿರು ಕೋಟ ಆಶ್ರಯದಲ್ಲಿ ನಡೆದ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ನುಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪಂಚಾಯತ್ ಕಾರ್ಯದರ್ಶಿ ಸುಮತಿ ಅಂಚನ್‌ ಅವರು ಈ ಗುರುತಿಸುವಿಕೆಯ ಮೂಲಕ ಜವಾಬ್ದಾರಿಯನ್ನು ಹೆಚ್ಚಿಸಿಕೊಂಡು ಇನ್ನಷ್ಟು ಕೃತುಶಕ್ತಿಯಿಂದ ಮಹಿಳೆಯರು ಕಾರ್ಯವೆಸಗಲಿ ಎಂದು ಶುಭಹಾರೈಸಿದರು.

ಈ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕ ಮಹಿಳೆಯರಿಗೆ ಡಾ. ಶಿವರಾಮ ಕಾರಂತ ಸಾಧಕ ಸ್ತ್ರೀ ಪುರಸ್ಕಾರ ನೀಡಿ ಗೌರವಿಸಲಾಯಿತು.ವೇದಿಕೆಯಲ್ಲಿ ಶಿವರಾಮ ಕಾರಂತ ಪ್ರತಿಷ್ಠಾನದ ಸದಸ್ಯರಾದ ಸುಶೀಲಾ ಸೋಮಶೇಖರ್, ಯು. ಎಸ್. ಶೆಣೈ, ಸುಮನಾ ಹೇರ್ಳೆ, ಕೋಟತಟ್ಟು ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಬಾರಿಕೆರೆ, ಸದಸ್ಯರಾದ ವಾಸು ಪೂಜಾರಿ ಉಪಸ್ಥಿತರಿದ್ದರು. 

ಕಾರ್ಯಕ್ರಮವನ್ನು ಸತೀಶ್ ವಡ್ಡರ್ಸೆ ಸ್ವಾಗತಿಸಿ ವಾಣಿಶ್ರೀ ಅಶೋಕ ಐತಾಳ್ ವಂದಿಸಿದರು. ಕುಂದಾಪ್ರ ರೇಡಿಯೋ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿದರು.

Exit mobile version