ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಮಹಿಳಾ ಮಂಡಲ ಪಾಂಡೇಶ್ವರ ಸಾಸ್ತಾನ ಇಲ್ಲಿ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಸಾಧಕ ಮಹಿಳೆಯರಿಗೆ ಸನ್ಮಾನ ಮತ್ತು ಸಾಂಸ್ಕೃತಿಕ, ಆಟೋಟ ಸ್ಪರ್ಧೆ, ಬಹುಮಾನ ವಿತರಣೆ ಕಾರ್ಯಕ್ರಮ ಭಾನುವಾರ ಜರಗಿತು.
ಮಹಿಳಾ ಮಂಡಲದ ಅಧ್ಯಕ್ಷೆ ಸುಮಿತ್ರಾ ಸುಧಾಕರ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಮಹಿಳಾ ಮಂಡಲದ ಮಾಜಿ.ಜಿ.ಪಂ ಸದಸ್ಯೆ ಮಲ್ಲಿಕಾ ಬಾಲಕೃಷ್ಣ ಹಿಂದೆ ಈ ಮಹಿಳಾ ಮಂಡಲದಲ್ಲಿ ತಾವು ಅಧ್ಯಕ್ಷರಾಗಿದ್ದ ಸಮಯದ ನೆನಪಿನ ಬುತ್ತಿಯನ್ನು ತೆರೆದಿಟ್ಟು, ಮಹಿಳಾ ಮಂಡಲದ ಕಾರ್ಯ ಚಟುವಟಿಕೆಗಳ ಕುರಿತು ಶ್ಲಾಘಿಸಿ, ಶುಭ ಹಾರೈಸಿದರು.
ಮುಖ್ಯ ಅಭ್ಯಾಗತರಾಗಿ ಸಂತ ಅಂತೋನಿ ಇಗರ್ಜಿ ಚರ್ಚ್‌ನ ಮಹಿಳಾ ಸಂಘಟನೆಯ ಅಧ್ಯಕ್ಷೆ ಪ್ರೀತಿ ಮರಿಯಾ ಲೂವಿಸ್, ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷೆ ಸುಲತಾ ಹೆಗ್ಡೆ ,ಪಾಂಡೇಶ್ವರ ಪಂಚಾಯತ್ ಮಾಜಿ ಅಧ್ಯಕ್ಷೆ ಲೀಲಾವತಿ ಗಂಗಾಧರ್ ಉಪಸ್ಥಿತರಿದ್ದರು.
ಉದ್ಯಮ ಕ್ಷೇತ್ರದ ಜ್ಯೂಡಿತ್ ಪಿಕಾರ್ಡೋ ಮತ್ತು ಸೇವಾ ಕಾರ್ಯದಲ್ಲಿ ನಿರತರಾದ ಲಿಲ್ಲಿ ರೋಡ್ರಿಗಸ್ ಅವರುಗಳನ್ನು ಸನ್ಮಾನಿಸಲಾಯಿತು.
ಮಹಿಳಾ ಮಂಡಲದ ವಿಮಲ ಮಹಿಳಾ ದಿನಾಚರಣೆಯ ಕುರಿತಾದ ಪ್ರಾಸ್ತಾವಿಕ ಮಾತನ್ನಾಡಿದರು,ರಮ್ಯಾ ಸ್ವಾಗತಿಸಿ, ಕಾರ್ಯದರ್ಶಿ ಜ್ಞಾನೇಶ್ವರಿ ಉಡುಪ ಕಾರ್ಯಕ್ರಮವನ್ನು ನಿರೂಪಿಸಿ, ಜ್ಯೋತಿ ವಂದನಾರ್ಪಣೆ ಸಲ್ಲಿಸಿದರು.

