Site icon Kundapra.com ಕುಂದಾಪ್ರ ಡಾಟ್ ಕಾಂ

ಹುಟ್ಟೂರ ಸಾಹಿತ್ಯ ಸಾಧಕ ಪುರಸ್ಕಾರಕ್ಕೆ ನರೇಂದ್ರ ಕುಮಾರ್ ಕೋಟ ಆಯ್ಕೆ

ಕುಂದಾಪ್ರ ಡಾಟ್‌ ಕಾಂ ಸುದ್ದಿ.
ಕೋಟ:
ಮಿತ್ರ ಮಂಡಳಿ ಕೋಟ ನೀಡುತ್ತಿರುವ ಸಾಹಿತ್ಯ ಸಾಧಕರಿಗೆ ಈ ವರ್ಷದ ಹುಟ್ಟೂರ ಸಾಹಿತ್ಯ ಸಾಧಕ ಪುರಸ್ಕಾರಕ್ಕೆ ಕೋಟದ ವಿವೇಕ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕರಾಗಿರುವ ನರೇಂದ್ರ ಕುಮಾರ್ ಕೋಟ ಆಯ್ಕೆಯಾಗಿದ್ದಾರೆ.

ಉಸಿರು ಎಂಬ ಸಂಸ್ಥೆಯನ್ನು ಹುಟ್ಟು ಹಾಕಿ ಕಳೆದ 25 ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ಬೇಸಿಗೆ ಶಿಬಿರಗಳನ್ನು ನಿರಂತರವಾಗಿ ಆಯೋಜಿಸಿ ಎಳೆಯ ಮಕ್ಕಳಲ್ಲಿ ಕನ್ನಡದ ಪ್ರೀತಿ ಮತ್ತು ಸಾಹಿತ್ಯ ರಚನೆಯ ಅಭಿರುಚಿಯನ್ನು ಮೂಡಿಸುವ ನಿಟ್ಟಿನಲ್ಲಿ ಅನೇಕ ಕಾರ್ಯಕ್ರಮಗಳನ್ನು  ಆಯೋಜಿಸಿದ್ದಲ್ಲದೆ ಅವರು ಬರೆದಿರುವ ಅನೇಕ ಕೃತಿಗಳನ್ನು ತಮ್ಮ ಸಂಸ್ಥೆಯ ಮೂಲಕ ಪ್ರಕಟಿಸಿದ್ದಾರೆ.

ಅತ್ಯುತ್ತಮ ಸಂಘಟಕರಾಗಿರುವ ಇವರು ಜಿಲ್ಲಾ ಹಾಗೂ ರಾಜ್ಯಮಟ್ಟದ ಅನೇಕ  ಸಾಹಿತ್ಯ ಕಾರ್ಯಕ್ರಮಗಳನ್ನು ಸಂಘಟಿಸಿದ್ದಲ್ಲದೆ ಐದು ಕುಂದಾಪ್ರ ಕನ್ನಡ ಸಮ್ಮೇಳನಗಳನ್ನು ಯಶಸ್ವಿಯಾಗಿ ಆಯೋಜಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಹಲವಾರು ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಯುವ ಮನಸ್ಸುಗಳಿಗೆ ಸ್ಪೂರ್ತಿಯಾಗಿದ್ದಾರೆ. ಬಹುಮುಖ ಪ್ರತಿಭಾವಂತರಾಗಿ ರಾಜ್ಯಮಟ್ಟದ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ಪಡೆದ ಇವರ ನಿಷ್ಠೆಯ ಕನ್ನಡ ಪರಿಚಾರಿಕೆಗಾಗಿ ಅರ್ಹರಾಗಿದ್ದಾರೆ.

ಇದೇ ಎಪ್ರಿಲ್ 4 ರಂದು ಶನಿವಾರ ಅಪರಾಹ್ನ 3.00 ಗಂಟೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೋಟದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡುವುದೆಂದು ಮಿತ್ರ ಮಂಡಳಿಯ ಸಿ. ಉಪೇಂದ್ರ ಸೋಮಯಾಜಿ ಪ್ರಕಟಣೆ ತಿಳಿಸಿದೆ.

Exit mobile version