ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಕಲಾರಾಧನೆ ಮೂಲಕ ಸಮಾಜಸೇವೆಗೆ ಮುನ್ನುಡಿ ಇಡುವ ಕಾರ್ಯ ನಿಜಕ್ಕೂ ಶ್ಲಾಘನಾರ್ಹ ಕಾರ್ಯ ಎಂದು ಕೋಟದ ಅಮೃತೇಶ್ವರೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಆನಂದ್ ಸಿ. ಕುಂದರ್ ಹೇಳಿದರು
ಅವರು ಬುಧವಾರ ಸಾಲಿಗ್ರಾಮದ ಪಾರಂಪಳ್ಳಿ ಪ್ರಗತಿಪರ ಕೃಷಿಕ ರವೀಂದ್ರ ಐತಾಳ್ ಮನೆಯಲ್ಲಿ ಹಮ್ಮಿಕೊಂಡ ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇಗುಲದ ಯಕ್ಷಗಾನ ಮಂಡಳಿಯ ಯಕ್ಷಗಾನ ಬಯಲಾಟದ ಅಂಗವಾಗಿ ಸಮಾಜದ ವಿವಿಧ ಸ್ತರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ, ಅಶಕ್ತರಿಗೆ, ಶೈಕ್ಷಣಿಕ ಸಂಸ್ಥೆಗಳಿಗೆ ನೆರವು ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ರವೀಂದ್ರ ಐತಾಳ್‌ರವರ ವಿನೂತನ ಕಾರ್ಯ ಸಮಾಜಕ್ಕೆ ಮಾದರಿಯಾಗಿದೆ ಎಂದರಲ್ಲದೆ ಯಕ್ಷಕಲಾವಿದರಿಗೆ ಸಹಾಯಮಾಡುವ ಮನಸ್ಥಿತಿ ಶ್ರೇಷ್ಠವಾದದ್ದು ಈ ನಿಟ್ಟಿನಲ್ಲಿ ಪಟ್ಲ ಫೌಂಡೇಶನ್ ಇಡೀ ಕಲಾವಿದರಿಗೆ ಶ್ರೀರಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಇದೇ ವೇಳೆ ಬಡಗಿನ ಶ್ರೇಷ್ಠ ಸ್ತ್ರೀವೇಷಧಾರಿ ಶಶಿಕಾಂತ್ ಶೆಟ್ಟಿ ಕಾರ್ಕಳ ದಂಪತಿಗಳನ್ನು ಸನ್ಮಾನಿಸಲಾಯಿತು. ಪತ್ರಕರ್ತ ರವೀಂದ್ರ ಕೋಟ, ಪವರ್ ಲಿಫ್ಟರ್ ಆದಿತ್ಯ ಸದಾನಂದ್, ಸ್ಥಳೀಯ ಕೃಷಿ ಕಾಯಕಜೀವಿಗಳನ್ನು ಅಭಿನಂದಿಸಲಾಯಿತು.
ಹಲವು ಸರಕಾರಿ, ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ, ಸಂಘಸಂಸ್ಥೆಗಳಿಗೆ ನೆರವು, ಕೋಟದ ಕಲ್ಲಟ್ಟು ದೇಗುಲ, ಕೋಡಿ ಮಹಾಸತೀಶ್ವರಿ ದೇಗುಲ, ಜೈ ಕುಂದಾಪ್ರ ಸೇವಾಟ್ರಸ್ಟ್ ಇವರುಗಳಿಗೆ ತಲಾ 25 ಸಾವಿರ ರೂ. ಗಳಂತೆ ಸಹಾಯನಿಧಿ, ಅಶಕ್ತರಿಗೆ ಆರ್ಥಿಕ ನೆರವನ್ನು ಆನಂದ ಸಿ ಕುಂದರ್, ಪಟ್ಲ ಫೌಂಡೇಶನ್ ಪ್ರವರ್ತಕ ಸತೀಶ ಶೆಟ್ಟಿ ಪಟ್ಲ ಹಸ್ತಾಂತರಿಸಿದರು.
ಸ್ಥಳೀಯರಾದ ಶಿವಾನಂದ ಮಯ್ಯ, ಪ್ರಗತಿಪರ ಕೃಷಿಕ ರವೀಂದ್ರ ಐತಾಳ್, ಪುತ್ರ ಪ್ರಜ್ವಲ್ ಐತಾಳ್, ಅಮೃತೇಶ್ವರೀ ಮೇಳದ ಭಾಗವತ ರಾಘವೇಂದ್ರ ಮಯ್ಯ ಹಾಲಾಡಿ ಮತ್ತಿತರರು ಇದ್ದರು.
ಕಾರ್ಯಕ್ರಮವನ್ನು ನಿವೃತ್ತ ಮುಖ್ಯ ಶಿಕ್ಷಕ ಕೆ. ರಾಜಾರಾಮ್ ಐತಾಳ್ ನಿರ್ವಹಿಸಿದರು. ಶಿಕ್ಷಕ ಶ್ರೀಧರ ಶಾಸ್ತ್ರಿ ವಂದಿಸಿದರು. ನಂತರ ಪಾಪಣ್ಣ ವಿಜಯ ಗುಣಸುಂದರಿ ಪ್ರದರ್ಶನಗೊಂಡಿತು.