ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ತಾಯಿಯೇ ಮೊದಲ ಗುರು. ಮನೆಯೇ ಮೊದಲ ಪಾಠಶಾಲೆ. ಈ ಮಾತಿನಂತೆ ಇಂದು ತಾಯಂದಿರೇ ತಮ್ಮ ಮಕ್ಕಳನ್ನು ತಿದ್ದಿ ತೀಡಬೇಕು. ಇಳಿ ವಯಸ್ಸಿನಲ್ಲಿಯೇ ನಾವು ಮಕ್ಕಳಿಗೆ ಸಂಸ್ಕಾರ, ಸಂಸ್ಕೃತಿ ಮತ್ತು ನಮ್ಮ ಪರಂಪರೆಯನ್ನು ಕಲಿಸಿದಾಗ ಮಾತ್ರ ಸಮಾಜದಲ್ಲಿ ದೌರ್ಜನ್ಯವೇ ಕಾಣದಂತಾಗುತ್ತದೆ ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ಹೇಳಿದರು.
ಜಿಲ್ಲಾ ಚೈತನ್ಯ ಸ್ತ್ರೀ ಶಕ್ತಿ ಒಕ್ಕೂಟ ಉಡುಪಿ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಉಡುಪಿ, ಉಡುಪಿ ಜಿಲ್ಲಾ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಸಂಘ ಉಡುಪಿ ಹಾಗೂ ವಿವಿಧ ಸಂಘಟನೆಯ ಸಹಯೋಗದೊಂದಿಗೆ ತೆಕ್ಕಟ್ಟೆ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜರುಗಿದ ಮಹಿಳಾ ಸ್ಪಂದನಾ ಸಮಾವೇಶ ನಿಮ್ಮ ದೂರು ನಮ್ಮ ಪರಿಹಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಉಡುಪಿ ಜಿಲ್ಲಾ ಚೈತನ್ಯ ಸ್ತ್ರೀ ಶಕ್ತಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪ್ರೇಮಾ ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಗೀತಾಂಜಲಿ ಸುವರ್ಣ ಹಾಗೂ ಶ್ರೀಲತಾ ಸುರೇಶ ಶೆಟ್ಟಿ, ವಿಕಲ ಚೇತನಾ ಅಧಿಕಾರಿ ರತ್ನಾ, ರಾಜ್ಯ ಸ್ಟೇಟ್ ಹೋಮ್ ಅಧೀಕ್ಷರು ಪುಷ್ಪಾ ರಾಣಿ, ಸಿಡಿಪಿಒ ಉಮೇಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ತೆಕ್ಕಟ್ಟೆ ಮಹಾಲಿಂಗೇಶ್ವರ ದೇವಸ್ಥಾನದಿಂದ ತೆಕ್ಕಟ್ಟೆ ದುರ್ಗಾಪರಮೇಶ್ವರಿ ಕಲ್ಯಾಣ ಮಂಟಪದ ತನಕ ಮಹಿಳೆಯರ ಚಂಡೆ ವಾದನ ಹಾಗೂ ಕಲಶ ಹಿಡಿದ ಮಹಿಳೆಯರ ಸಾಲಿನೊಂದಿಗೆ ಅಯೋಗದ ಅಧ್ಯಕ್ಷರನ್ನು ಆರತಿ ಬೆಳಗಿ ಸ್ವಾಗತಿಸಿಕೊಂಡು ಪುರಮೆರವಣಿಗೆಯಲ್ಲಿ ಬರಮಾಡಿಕೊಂಡು ಅದ್ದೂರಿಯಾಗಿ ಸ್ವಾಗತಿಸಿಕೊಳ್ಳಲಾಯಿತು. ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಮಯ ಹತ್ತು ಹಲವಾರೂ ಸಮಸ್ಯೆಗಳ ದೂರನ್ನು ಮಹಿಳೆಯರು ಸೇರಿದಂತೆ ಸಾರ್ವಜನಿಕರು ಅಧ್ಯಕ್ಷರಿಗೆ ನೀಡಿದರು. ದೂರಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಯ ಅಧಿಕಾರಿಗಳಿಗೆ ಸಂಪರ್ಕಕಿಸಿ ಸಮಸ್ಯೆಯನ್ನು ಬಗೆ ಹರಿಸಲು ಕೆಲವೊಂದು ವಿಚಾರಗಳಿಗೆ ಖಡಕ್ ಆದೇಶವನ್ನು ನೀಡಿದರು.
ಹೇಮಾ ಜಗನ್ನಾಥ್ ಪ್ರಾರ್ಥಿಸಿದರು. ವಸಂತಿ ಕೊರೋಡ್ಕರ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರ್ವಹಿಸಿದರು. ಸುಗುಣ ವಂದಿಸಿದರು.

