Kundapra.com ಕುಂದಾಪ್ರ ಡಾಟ್ ಕಾಂ

ರಕ್ತದ ಅಭಾವ ನೀಗಿಸಲು ಗಂಗೊಳ್ಳಿ ಯುವಕರಿಂದ ಸ್ವಯಂಪ್ರೇರಿತ ರಕ್ತದಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಎಲ್ಲೆಡೆಯೂ ಕೊರೊನಾ ಭೀತಿಯಿರುವ ಹಿನ್ನಲೆಯಲ್ಲಿ ವಿವಿಧ ಆಸ್ಪತ್ರೆಗಳ ರಕ್ತನಿಧಿ ಕೇಂದ್ರಗಳಲ್ಲಿ ರಕ್ತ ಸಂಗ್ರಹಣೆಯಲ್ಲೂ ತೀವ್ರ ಇಳಿಮುಖವಾಗುತ್ತಿದೆ. ರಕ್ತದಾನಿಗಳು ಸ್ವಯಂಪ್ರೇರಿತರಾಗಿ ರಕ್ತನಿಧಿ ಕೇಂದ್ರಗಳಿಗೆ ಬಂದು ರಕ್ತದಾನ ಮಾಡಿ ರಕ್ತದ ಅಭಾವವನ್ನು ಕಡಿಮೆ ಮಾಡಲು ಸಹಕಾರ ನೀಡಬೇಕೆಂಬ ಸರಕಾರದ ಮನವಿಗೆ ಓಗೊಟ್ಟು, ಗಂಗೊಳ್ಳಿಯ ರಕ್ತದಾನಿಗಳು, ರಕ್ತದಾನಿಗಳ ಸಂಘವು ರಕ್ತದಾನ ಶಿಬಿರದ ಆಯೋಜಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಎತ್ತಿಹಿಡಿದಿದೆ.

ಕರಾವಳಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘದ ಮುಂದಾಳತ್ವ:
ಜಿಲ್ಲೆಯ ರಕ್ತನಿಧಿ ಕೇಂದ್ರದಲ್ಲಿ ಇನ್ನೆರೆಡು ದಿನಗಳಲ್ಲಿ ಸಂಗ್ರಹವಾಗಿರುವ ರಕ್ತ ಕಡಿಮೆಯಾಗಿ ರಕ್ತದ ಅಭಾವ ಸೃಷ್ಟಿಯಾಗುವ ಸಾಧ್ಯತೆ ಇದೆ. ಲಾಕ್ ಡೌನ್ ಅವಧಿಯಲ್ಲಿ ರಕ್ತದಾನ ಶಿಬಿರ ಆಯೋಜಿಸಿ ರಕ್ತವನ್ನು ಸಂಗ್ರಹಿಸಿ ರಕ್ತನಿಧಿ ಕೇಂದ್ರಕ್ಕೆ ನೀಡುವುದು ಸವಾಲಿನ ಸಂಗತಿಯಾಗಿದ್ದರೂ, ರಕ್ತದ ಅಭಾವವನ್ನು ನೀಗಿಸುವ ಸಲುವಾಗಿ ಗಂಗೊಳ್ಳಿಯ ಕರಾವಳಿ ಸ್ವಯಂಪ್ರೇರಿತ ರಕ್ತದಾನಿಗಳ ಸಂಘವು ಜಿಲ್ಲಾ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಜಿಲ್ಲಾಡಳಿತದ ಅನುಮತಿ ಪಡೆದು ಬುಧವಾರ ರಕ್ತದಾನ ಶಿಬಿರ ಆಯೋಜಿಸಿತ್ತು.

ಶಿಬಿರದಲ್ಲಿ 60ಮಂದಿ ಗಂಗೊಳ್ಳಿಯ ರಕ್ತದಾನಿಗಳು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಮೊಬೈಲ್ ಸಂದೇಶ ತಿಳಿದು ಸ್ವಯಂಪ್ರೇರಿತರಾಗಿ ಬಂದು ರಕ್ತದಾನ ಮಾಡಿರುವುದು, ಅದರಲ್ಲೂ ಕೊರೊನಾ ನಿಯಂತ್ರಣದಲ್ಲಿ ಶ್ರಮಿಸುತ್ತಿರುವ ಪೊಲೀಸರು ಕೂಡ ರಕ್ತದಾನ ಮಾಡಿ ಜನರಲ್ಲಿ ಜಾಗೃತಿ ಮೂಡಿಸಿರುವುದು ವಿಶೇಷವಾಗಿತ್ತು. ಕುಂದಾಪ್ರ ಡಾಟ್ ಕಾಂ ಸುದ್ದಿ.

ಕೋವಿಡ್-19 ತಪಾಸಣೆ ಬಳಕವಷ್ಟೇ ರಕ್ತದಾನ:
ಕೊರೊನಾ ವೈರಸ್ ಭೀತಿ ಹಿನ್ನಲೆಯಲ್ಲಿ ಜಿಲ್ಲಾಡಳಿತದ ನಿರ್ದೇಶನದಂತೆ ರಕ್ತದಾನಿಗಳಿಗೆ ಕೋವಿಡ್-19 ತಪಾಸಣೆ, ಮುಂಜಾಗ್ರತಾ ಕ್ರಮ ಅನುಸರಿಸಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ನೊಂದಾವಣೆ, ತಪಾಸಣೆ, ರಕ್ತದಾನ ಸಂದರ್ಭಗಳಲ್ಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗಿತ್ತು. ರಕ್ತದಾನಿಗಳ ಶಿಸ್ತು, ರಕ್ತನಿಧಿ ಕೇಂದ್ರದ ಸಿಬ್ಬಂದಿಗಳ ಸೇವಾ ಮನೋಭಾವ ಶಿಬಿರದಲ್ಲಿ ಎದ್ದು ಕಾಣುತ್ತಿತ್ತು. ಕೇವಲ ೫೦ ಮಂದಿಗೆ ಸೀಮಿತಗೊಳಿಸಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ 60ಮಂದಿ ಪಾಲ್ಗೊಂಡು ರಕ್ತದಾನ ಮಾಡಿದ್ದರೆ, ಇನ್ನು ಕೆಲವರು ರಕ್ತದಾನ ಮಾಡಲು ಸಾಧ್ಯವಾಗದೆ ನಿರಾಸೆಯಿಂದ ಮರಳಿದರು.  ಕುಂದಾಪ್ರ ಡಾಟ್ ಕಾಂ ಸುದ್ದಿ.

ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ. ನಾಗಭೂಷಣ ಉಡುಪ, ಬೈಂದೂರು ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರೇಮಾನಂದ, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ. ವೀಣಾ ಕುಮಾರಿ, ಕುಂದಾಪುರ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷ ದಿನಕರ ಶೆಟ್ಟಿ, ಗಂಗೊಳ್ಳಿ ಪೊಲೀಸ್ ಠಾಣೆ ಉಪನಿರೀಕ್ಷಕ ಭೀಮಾಶಂಕರ ಎಸ್., ರಕ್ತದಾನಿಗಳ ಸಂಘದ ದಿವಾಕರ ಎನ್. ಖಾರ್ವಿ, ಬಿ.ರಾಘವೇಂದ್ರ ಪೈ, ಚರಣ್ ಖಾರ್ವಿ, ನಾಗರಾಜ ಖಾರ್ವಿ ಕೊಲ್ಲೂರು, ಚಂದ್ರ ಖಾರ್ವಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಆನಂದ ಖಾರ್ವಿ, ರಕ್ತನಿಧಿ ಕೇಂದ್ರದ ಸಿಬ್ಬಂದಿಗಳು, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು./ಕುಂದಾಪ್ರ ಡಾಟ್ ಕಾಂ ಸುದ್ದಿ/

 

Exit mobile version