ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ : ರಕ್ತನಿಧಿ ಕೇಂದ್ರಗಳಲ್ಲಿ ರಕ್ತದ ಕೊರತೆ ಕಾಡುತ್ತಿದ್ದು ಪ್ರತಿಯೊಬ್ಬರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಲು ಮುಂದಾಗಬೇಕಿದೆ. ಅಪಘಾತ ಅಥವಾ ಹೆರಿಗೆ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಎದುರಾಗುತ್ತದೆ. ಇಂತಹ ಸಂದರ್ಭಗಳಲ್ಲಿ ರಕ್ತದಾನಿಗಳು ನೀಡಿದ ರಕ್ತವನ್ನು ರೋಗಿಗಳಿಗೆ ನೀಡಲಾಗುತ್ತದೆ. ಕುಂದಾಪುರದಲ್ಲಿ ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಮೂಲಕ ಸುಮಾರು ೧.೭೫ ಕೋಟಿ ರೂ. ವೆಚ್ಚದಲ್ಲಿ ಸ್ಥಾಪನೆಯಾಗಿರುವ ರಕ್ತನಿಧಿ ಕೇಂದ್ರದ ಮೂಲಕ ಸುಮಾರು ೧೦೦ಕ್ಕೂ ಅಧಿಕ ರಕ್ತದಾನ ಶಿಬಿರಗಳನ್ನು ಆಯೋಜಿಸಿ ರೋಗಿಗಳಿಗೆ ರಕ್ತವನ್ನು ನೀಡುವ ಕಾರ್ಯ ನಡೆಸುತ್ತಿದೆ ಎಂದು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಕುಂದಾಪುರ ಘಟಕದ ಚೇರ್‌ಮೆನ್ ಎಸ್.ಜಯಕರ ಶೆಟ್ಟಿ ಹೇಳಿದರು.
ಅವರು ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಗಂಗೊಳ್ಳಿ ಮತ್ತು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಘಟಕ ಇವರ ಜಂಟಿ ಆಶ್ರಯದಲ್ಲಿ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಜಿ. ವಿಠಲ ಭಾಸ್ಕರ ಶೆಣೈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಹಿರಿಯ ಸದಸ್ಯ ಎಚ್.ಗಣೇಶ ಕಾಮತ್, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಕುಂದಾಪುರ ಘಟಕದ ಕಾರ್ಯದರ್ಶಿ ವೈ.ಸೀತಾರಾಮ ಶೆಟ್ಟಿ, ಖಜಾಂಚಿ ಶಿವರಾಮ ಶೆಟ್ಟಿ, ಗಣೇಶ ಆಚಾರ್ಯ, ಶ್ರೀ ರಾಘವೇಂದ್ರ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ಗಣೇಶ ಕಿಣಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಜಿ ಅಧ್ಯಕ್ಷ ಬಿ.ರಾಘವೇಂದ್ರ ಪೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.