Kundapra.com ಕುಂದಾಪ್ರ ಡಾಟ್ ಕಾಂ

ವಂಡ್ಸೆ ಜಿಪಂ ಕ್ಷೇತ್ರ: ರಸ್ತೆ, ನೀರು, ಸಮಸ್ಯೆಗಳು ನೂರಾರು. ಅಭ್ಯರ್ಥಿಗಳಿಗೆ ಸವಾಲು

ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.
ಕುಂದಾಪುರ: ಜಿಲ್ಲಾ ಪಂಚಾಯಿತ್ ಕ್ಷೇತ್ರವಾದ ವಂಡ್ಸೆ ಕುಂದಾಪುರ ತಾಲೂಕಿನ ಪ್ರಮುಖ ಹೋಬಳಿ ಕೇಂದ್ರವೂ ಹೌದು. ಧಾರ್ಮಿಕ, ರಾಜಕೀಯ ಹಾಗೂ ತಾಲೂಕು ಹೋರಾಟ ಮುಂತಾದ ಕಾರಣದಿಂದಾಗಿ ಆಗಾಗ ಸುದ್ದಿ ಮಾಡುತ್ತಲೇ ಬಂದಿರುವ ಕ್ಷೇತ್ರವಿದು. ಮಾರಣಕಟ್ಟೆ ದೇವಸ್ಥಾನಕ್ಕೆ ತೆರಳುವ ಭಕ್ತರು ಚಕ್ರ ನದಿಯಲ್ಲಿ ಮಿಂದು ಬಟ್ಟೆ ಒಣಗಿಸಿ ಶುದ್ದ ಬಟ್ಟೆ ತೊಟ್ಟು ಹೋಗುತ್ತಿದ್ದ ಪ್ರದೇಶಕ್ಕೆ ಹಿಂದೆ ವಣಸೆ ಎಂಬ ಹೆಸರಿತ್ತು. ಕಾಲಕ್ರಮೇಣ ಆಡುಭಾಷೆಯಲ್ಲಿ ವಂಡ್ಸೆ ಎಂಬ ಹೆಸರು ಶಾಶ್ವತವಾಯಿತು ಎಂಬುದು ಊರಿನ ಹೆಸರಿನ ಹಿಂದಿನ ಕಥೆ.

ಕಳೆದ ಭಾರಿಯ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯರ ಪರ ಬಂದಿದ್ದ ಮೀಸಲಾತಿ, ಈ ಭಾರಿ ಸಾಮಾನ್ಯ ಮೀಸಲು ಬಂದಿದ್ದರಿಂದ ಕ್ಷೇತ್ರದಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸ್ಪರ್ಧಿಸುವ ಸಮಾನ ಅವಕಾಶ ಮಾಡಿಕೊಟ್ಟಿದೆ. ಆದರೆ ಮೂರು ಪಕ್ಷಗಳಿಂದ ಪುರುಷ ಅಭ್ಯರ್ಥಿಗಳೇ ಕಣಕ್ಕಿಳಿದಿದ್ದಾರೆ. ಬಿಜೆಪಿಯಿಂದ ಹಾಲಿ ಜಿಪಂ ಸದಸ್ಯ ಬಾಬು ಶೆಟ್ಟಿ ತಗ್ಗರ್ಸೆ ಕಣದಲ್ಲಿದ್ದರೇ, ಕಾಂಗ್ರೆಸ್ ಹಾಲಿ ತಾಪಂ ಸದಸ್ಯ ಹರ್ಕೂರು ಮಂಜಯ್ಯ ಶೆಟ್ಟಿ ಕಣದಲ್ಲಿದ್ದಾರೆ. ಸಿಪಿಎಂ ಪಕ್ಷದಿಂದ ಸುರೇಶ್ ಕಲ್ಲಾಗರ ಸ್ವರ್ಧಿಸುತ್ತಿದ್ದಾರೆ. (ಕುಂದಾಪ್ರ ಡಾಟ್ ಕಾಂ ವರದಿ)

ಒಂದು ನೋಟ:
ಹೆಚ್ಚು ಗ್ರಾಮೀಣ ಪ್ರದೇಶಗಳನ್ನೇ ಒಳಗೊಂಡಿರುವ ಜಿಪಂ ಕ್ಷೇತ್ರಗಳ ಪೈಕಿ ವಂಡ್ಸೆಯೂ ಹೌದು. ಈ ಕ್ಷೇತ್ರ ಭೌಗೋಳಿಕವಾಗಿ ಅರಣ್ಯ ಪ್ರದೇಶ ಹೊಂದಿತ್ತಾದರೂ, ಹೊಸದಾಗಿ ಕ್ಷೇತ್ರ ವಿಂಗಡನೆಯಾಗಿದ್ದರಿಂದ ಮರವಂತೆ ಗ್ರಾಪಂ ಸೇರ್ಪಡೆಗೊಂಡು ಕರಾವಳಿ ಪ್ರದೇಶವೂ ಸೇರಿಕೊಳ್ಳುತ್ತದೆ. ಅಭಯಾರಣ್ಯದ ಮಗ್ಗಲಲ್ಲಿರುವ ವಂಡ್ಸೆ ಅಭಯಾರಣ್ಯ ಕಾಯಿದೆಯೇ ಅಭಿವೃದ್ಧಿಗೆ ತೊಡಕಾಗಿದೆ, ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಕಚ್ಚಾರಸ್ತೆಗಳಿದ್ದು, ವಿದ್ಯುತ್ ಸಂಪರ್ಕ ವಂಚಿತ ಮನೆಗಳು ಇವೆ. ನಕ್ಸಲ್ ಪೀಡಿತ ಪ್ರದೇಶವೂ ಸೇರಿಕೊಳ್ಳುತ್ತದೆ. ಇದರೊಟ್ಟಿಗೆ ಕಸ್ತೂರಿ ರಂಗನ್ ವರದಿ ವಂಡ್ಸೆ ಜಿಪಂ ತಲೆ ಮೇಲೆ ತೂಗುಕತ್ತಿಯಾಗಿ ತೂಗುತ್ತಿದೆ.

ಚಕ್ರಾನದಿ ಹರಿಯುತ್ತಿದ್ದರೂ ವಂಡ್ಸೆ ಜಿಪಂ ಕುಡಿಯುವ ನೀರಿನ ಸಮಸ್ಯೆಯಿಂದ ಬಳಲುತ್ತಿದೆ. ಕೊಳವೆ ಬಾವಿಯಲ್ಲಿ ನೀರು ಬರೋದಿಲ್ಲ. ಅಲ್ಪಸ್ವಲ್ಪ ನೀರು ಬಂದರೂ ನೀರು ಕಿಲುಬು ವಾಸನೆ. ತೆರೆದ ಬಾವಿ ನೀರು ಸಿಗೋದೆ ಕಷ್ಟ. ಇನ್ನು ಮರವಂತೆಯ ಸಮುದ್ರ ಕಿನಾರೆ ಅಭಿವೃದ್ಧಿಯಂತೂ ಮರಿಚಿಕೆಯಾಗಿಯೇ ಉಳಿದಿದೆ. (ಕುಂದಾಪ್ರ ಡಾಟ್ ಕಾಂ ವರದಿ)

ಬೈಂದೂರು ತಾಲೂಕಾಗಬೇಕು ಎಂಬ ಕೂಗು ಎದ್ದಾಗಲೆಲ್ಲಾ ಒಂದು ಪ್ರತ್ಯೇಕತೆಯ ಕೂಗು ಏಳುವುದು ವಂಡ್ಸೆ ಹೋಬಳಿಯಿಂದ. ಕುಂದಾಪುರಕ್ಕಿಂತ ಬೈಂದೂರು ನಮಗೆ ದೂರ. ಬೈಂದೂರು ತಾಲೂಕಿನಿಂದ ನಮ್ಮನ್ನು ಹೊರಗಿಡಿ ಅಥವಾ ವಂಡ್ಸೆಯನ್ನು ತಾಲೂಕು ಕೇಂದ್ರವನ್ನಾಗಿ ಮಾಡಿ ಎಂಬ ಬೇಡಿಕೆ ಇಡುತ್ತಲೇ ಬಂದಿದ್ದಾರೆ ಇಲ್ಲಿಯ ಜನ. ಹಾಗಾಗಿ ರಾಜಕೀಯ ನಾಯಕರಿಗೂ ಇದೊಂದು ಕಗ್ಗಂಟಾಗಿಯೇ ಉಳಿದಿದೆ. ಯಾರಿಗೆ ತಾಲೂಕು ಕೇಂದ್ರ ನೀಡಿದರೂ ಅಸಮಾಧಾನ ಮೂಡುವುದರಿಂದ ರಾಜಕಾರಣಿಗಳು ಜಾಣ ಕಿವುಡರಾಗಿಯೇ ಉಳಿದಿದ್ದಾರೆ. ಇದು ಕುಂದಾಪ್ರ ಡಾಟ್ ಕಾಂ ವರದಿ.

ವಂಡ್ಸೆ ಜಿಪಂ ಸದಸ್ಯೆ ಇಂದಿರಾ ಶೆಟ್ಟಿ ತಮ್ಮ ಅಧಿಕಾರ ಆವಧಿಯಲ್ಲಿ ವಂಡ್ಸೆ ಜಿಪಂಗೆ ದಾಖಲೆ ಅನುದಾನ ತಂದಿದ್ದು, ಅದರಲ್ಲಿ ಹೆಚ್ಚು ಅನುದಾನ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಬಳಸಿಕೊಳ್ಳಲಾಗಿದೆ ಆದರೂ ನೀರಿನ ದಾಹ ತಣಿದಿಲ್ಲ. ಸರಕಾರಿ ಭೂಮಿ ಇಲ್ಲದ ಕಾರಣ ಅಭಿವೃದ್ಧಿ ಕೆಲಸಕ್ಕೆ ಹಿನ್ನೆಡೆ. ಆದರೂ ಇದ್ದಿದ್ದರಲ್ಲೇ ಅಭಿವೃದ್ಧಿಯತ್ತ ದಾಪುಗಾಲಿಕ್ಕುತ್ತಿರುವ ವಂಡ್ಸೆ ಜಿಪಂ. ಮುಂದೆ ಸಾಗಬೇಕಾದ ಹಾದಿ ಬಹಳ ಇದೆ.

ಕ್ಷೇತ್ರ ಸಮಸ್ಯೆ:
* ಚಕ್ರಾನದಿ ಹರಿಯುತ್ತಿದ್ದರೂ ಕಾಡುತ್ತಿರುವ ಕುಡಿಯುವ ನೀರು ಸಮಸ್ಯೆ.
* ಉಪ್ಪಾಗುತ್ತಿರುವ ಚಕ್ರ ನದಿ ನೀರು, ಕೊಳವೆ ಬಾವಿ ಮತ್ತು ತೆರದ ಬಾವಿಯಲ್ಲಿ ನೀರಿಲ್ಲ.
* ಕೃಷಿಗೆ ಕಾಡುಪ್ರಾಣಿಗಳ ಉಪಟಳ.
* ಕಸೂರಿ ರಂಗನ ವರದಿ, ಅಭಿವೃದ್ಧಿಗೆ ಸರಕಾರಿ ಜಾಗದ ಕೊರತೆ, ರಕ್ಷಿತಾರಣ್ಯದ ತೊಡಕು.
* ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ವಿದ್ಯುತ್ ಸಂಪರ್ಕ ರಹಿತ ಮನೆಗಳು ಇಲ್ಲಿನ ಪ್ರಮುಖ ಸಮಸ್ಯೆ.
* ಬ್ರಿಟಿಷ್ ಕಾಲದ ಬಂಗಲೆಯಿದ್ದರೂ ನಿರ್ಲಕ್ಷ್ಯದಿಂದ ಸ್ಥಿಥಿಲಾವಸ್ಥೆ.
* ಪ್ರವಾಸೋದ್ಯಮ ಕಡೆಗಣನೆ

ಚುನಾವಣೆ ಕ್ಷೇತ್ರಗಳು:
ಮರವಂತೆ, ಹಡವು, ಬಡಾಕೆರೆ, ನಾಡಾ, ಸೇನಾಪುರ, ಹಕ್ಲಾಡಿ, ಚಿತ್ತೂರು, ವಂಡ್ಸೆ ಯಡೂರು-ಕುಂಜ್ಞಾಡಿ, ಹೊಸೂರು, ಆಲೂರು, ಹರ್ಕೂರು, ನೂಜಾಡಿ, ಕುಂದಬಾರಂದಾಡಿ.
ಕಾಂಗ್ರೆಸ್ ಬೆಂಬಲಿತ ಗ್ರಾಪಂ : ನಾಡಾ, ವಂಡ್ಸೆ, ಹಕ್ಲಾಡಿ ಗ್ರಾಪಂ.
ಬಿಜೆಪಿ ಬೆಂಬಲಿತ ಗ್ರಾಪಂ: ಆಲೂರು, ಮರವಂತೆ, ಯಡೂರು-ಕುಂಜ್ಞಾಡಿ, ಚಿತ್ತೂರು. (ಕುಂದಾಪ್ರ ಡಾಟ್ ಕಾಂ ವರದಿ)

ಈ ಹಿಂದಿನ ಜಿಪಂ ಸದಸ್ಯರು
2000ದಲ್ಲಿ ನೂಜಾಡಿ ಅಶೋಕ್ ಕುಮಾರ್ ಶೆಟ್ಟಿ, 2005ರಲ್ಲಿ ಹರ್ಕೂರು ಮಂಜಯ್ಯ ಶೆಟ್ಟಿ, 2010ರಲ್ಲಿ ಇಂದಿರಾ ಶೆಟ್ಟಿ

ನನ್ನ ಅಧಿಕಾರಾವಧಿಯಲ್ಲಿ ಸುಮಾರು 9 ಕೋಟಿ ಅನುದಾನದಲ್ಲಿ ಕುಡಿಯುವ ನೀರು ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಂಡ್ಸೆ ಮೂಕಾಂಬಿಕಾ ಜನತಾ ಕಾಲೋನಿ, ಸೌಕೂರು ದೇವಸ್ಥಾನ ಹಾಗೂ ಹಕ್ಲಾಡಿ ಎಸ್ಸಿ ಕಾಲೋನಿ ಕುಡಿಯುವ ನೀರಿಗೆ ಹೆಚ್ಚಿನ ಅನುದಾನ ಬಳಸಲಾಗಿದ್ದು, ಬಾವಿ ಟ್ಯಾಂಕ್, ಪೈಪ್ ಲೈನ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಬೇಡಿಕೆಯಿದ್ದಲ್ಲೆಲ್ಲಾ ಬಾವಿ ರಸ್ತೆ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಜಿಪಂ ಅಭಿವೃದ್ದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದೇನೆ. ಬಾವಿ, ಟ್ಯಾಂಕ್ ಹಾಗೂ ಪೈಪ್ ಲೈನ್ ಸೇರಿ ಯೋಜನೆಗೆ ಹಕ್ಲಾಡಿಗೆ 20, ವಂಡ್ಸೆ ಹಾಗೂ ಸೌಕೂರು ದೇವಸ್ಥಾನ ಬಳಿ 24 ಲಕ್ಷ ಅನುದಾನ, ಆಲೂರು 10 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ.  – ಇಂದಿರಾ ಶೆಟ್ಟಿ, ಸದಸ್ಯೆ ವಂಡ್ಸೆ ಜಿಪಂ ಕ್ಷೇತ್ರ

Exit mobile version