ಕುಂದಾಪ್ರ ಡಾಟ್ ಕಾಂ ವಿಶೇಷ ವರದಿ.
ಕುಂದಾಪುರ: ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ, ಎಳವೆಯಲ್ಲಿಯೇ ಈ ಹುಡುಗಿಯ ಸಾಧನೆ ಅಸದಳ! ಚದುರಂಗದ ಮೂಲಕ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಬಾಲೆ ಕುಂದಾಪುರ ಹೆಸರನ್ನು ಕ್ರೀಡೆಯಮೂಲಕ ಎತ್ತರಕ್ಕೇರಿಸಿದ್ದಾಳೆ.
ಅಮೂಲ್ಯ ಶೆಟ್ಟಿ. ಕುಂದಾಪುರ ಎಜ್ಯುಕೇಶನ್ ಸೊಸೈಟಿ ಆಡಳಿತಕ್ಕೊಳಪಟ್ಟ ವಿ.ಕೆ.ಆರ್.ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಹತ್ತನೇ ತರಗತಿ ಮುಗಿಸಿದ್ದಾಳೆ. ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಚದುರಂಗ ಸ್ಪರ್ಧೆಯಲ್ಲಿ ಸತತ 5 ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುವುದಲ್ಲದೇ, ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಪ್ರತಿಭಾನ್ವಿತೆ.
ಬುದ್ಧಿಶಕ್ತಿಗೆ ಪ್ರಚೋದನೆ ನೀಡಿ ಮಕ್ಕಳನ್ನು ಬೌದ್ಧಿಕವಾಗಿ ಎತ್ತರಕ್ಕೆ ಬೆಳೆಸುವ ಚದುರಂಗ ಆಟದಲ್ಲಿ ಸಾಧನೆ ಶಿಖರವೇರುವ ಅದೃಷ್ಟಶಾಲಿಗಳು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಇಂತಹ ಪ್ರತಿಭಾನ್ವಿತರ ಸಾಲಿಗೆ ಸೇರುವ ಹೆಮ್ಮೆಯ ಕುವರಿ ಅಮೂಲ್ಯ. ಕುಂದಾಪ್ರ ಡಾಟ್ ಕಾಂ ವರದಿ.
ಎಳವೆಯಲ್ಲೇ ಚದುರಂಗದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಚತುರೆ ಎನಿಸಿರುವ ಅಮೂಲ್ಯಳ ತಂದೆ ವಡೇರ ಹೋಬಳಿ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಬಿ. ಸುಧಾಕರ ಶೆಟ್ಟಿ. ತಾಯಿ ಮಾವಿನಕಟ್ಟೆ ಶ್ರೀ ಮೂಕಾಂಬಿಕಾ ದೇವಳದ ಪ್ರೌಢ ಶಾಲೆ ಶಿಕ್ಷಕಿ ಮಲ್ಲಿಕಾ ಶೆಟ್ಟಿ. ಅಮೂಲ್ಯಳ ಚದುರಂಗಕ್ಕೆ ಸ್ಪೂರ್ತಿ ತಂದೆ-ತಾಯಿ. ಬಾಬು ಜೆ. ಪೂಜಾರಿ ಮಾರ್ಗದರ್ಶನ ಹಾಗೂ ತರಬೇತಿ ನೀಡಿದರು. ಟೇಬಲ್ ಟೆನ್ನಿಸ್ ಪಂದ್ಯಾಟಕ್ಕೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ರಾಜೇಂದ್ರ ಶೆಟ್ಟಿ ತರಬೇತಿ ನೀಡುತ್ತಿದ್ದಾರೆ. ಅಮೂಲ್ಯ ಚದುರಂಗದಲ್ಲಿ ಕೌಶಲ್ಯ ತೋರಿದಂತೆ ಓದಿನಲ್ಲೂ ಪ್ರಥಮಳೇ ಆಗಿರುತ್ತಿದ್ದುದು ಸಂತಸದ ವಿಚಾರ.
ಸಾಧನೆ ದಾರಿ:
ಮಣಿಪಾಲ ವಿಶ್ವವಿದ್ಯಾನಿಲಯದವರು ನಡೆಸಿದ ರಾಷ್ಟ್ರ ಮಟ್ಟದ ಇನೋವೇಟರ್ಸ್ ಸ್ಪರ್ಧೆಯಲ್ಲಿ ಚಥುತ ಸ್ಥಾನ, ಗೈಡ್ಸ್‌ನಲ್ಲಿ ರಾಷ್ಟ್ರಪತಿ ಪುರಸ್ಕಾರ, ಟೇಬಲ್ ಟೆನ್ನಿಸ್ ಆಟದಲ್ಲಿ ಮೂರು ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆ, ಚಿತ್ರಕಲಾ ಸ್ಪರ್ಧೆಯಲ್ಲಿ ಹೈಯರ್ ಗ್ರೇಡ್ ಪ್ರಥಮ ದರ್ಜೆ, ಚೆಸ್‌ನಲ್ಲಿ ಫಿಡೇರೇಟಿಂಗ್ 1366ರನ್ನು ಹೊಂದಿದ ಸಾಧನೆ. ಭಾರತ ಸಂಸ್ಕೃತ ಪ್ರತಿಷ್ಠಾನದವರು ನಡೆಸಿದ ರಾಮಾಯಣ, ಮಹಾಭಾರತ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ.ಕುಂದಾಪ್ರ ಡಾಟ್ ಕಾಂ ವರದಿ.
ದಸರಾ ಕ್ರೀಡಾಕೂಟದಲ್ಲಿ ಟೇಬಲ್ ಟೆನ್ನಿಸ್ ಆಟದಲ್ಲಿ ಭಾಗವಹಿಸಿ ರಾಜ್ಯ ಮಟ್ಟಕ್ಕೆ ಆಯ್ಕೆ, ಇತ್ತೀಚೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ಚದುರಂಗ ಸ್ಪರ್ಧೆಯಲ್ಲಿ ಸತತ 5 ಬಾರಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಗೌರವ. ಉಡುಪಿ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ಸಮಿತಿಯವರು ಚೆಸ್‌ನಲ್ಲಿ ಈಕೆ ವಿಶಿಷ್ಟ ಸಾಧನೆ ಮಾಡಿರುವುದನ್ನು ಗುರುತಿಸಿ ಗೌರವಿಸಿದ ಹೆಗ್ಗಳಿಕೆ ಅಮೂಲ್ಯಾಳದ್ದು.
ಕುಂದಾಪುರದ ಹೆಮ್ಮೆಯ ಹುಡುಗಿ ಅಮೂಲ್ಯ ಚದುರಂಗದೊಂದಿಗೆ ಕ್ರೀಡಾ, ಶೈಕ್ಷಣಿಕ ಕ್ಷೇತ್ರದಲ್ಲಿ ಜಾಣ್ಮೆ ತೋರಿ ಮೆಚ್ಚುಗೆಗೆ ಪಾತ್ರವಾಗಿರುವುದಲ್ಲದೇ, ಮುಂದೆ ಐ.ಎ.ಎಸ್. ಆಫೀಸರ್ ಆಗುವ ಗುರಿ ಹೊಂದಿದ್ದಾಳೆ. ಕುಂದಾಪ್ರ ಡಾಟ್ ಕಾಂ ವರದಿ.