Kundapra.com ಕುಂದಾಪ್ರ ಡಾಟ್ ಕಾಂ

ಹಿಂದಿ ವಾಹಿನಿಯಲ್ಲಿ ಹಾಡಿನ ಮೋಡಿ ಮಾಡುತ್ತಿದ್ದಾಳೆ ಕುಂದಾಪುರದ ಪೋರಿ ಸಾನ್ವಿ ಶೆಟ್ಟಿ

ಸುನಿಲ್ ಹೆಚ್. ಜಿ ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ತನ್ನ ಮೇರು ಕಂಠದ ಮೂಲಕ ಸುಮಧುರವಾಗಿ ಆ ಹುಡುಗಿ ಹಾಡುತ್ತಿದ್ದರೇ ಅಲ್ಲಿದ್ದ ಸಂಗೀತಕಾರರು ನಿಬ್ಬೆರಗಾಗಿ ಕೇಳುತ್ತಿದ್ದರು. ನೆರೆದಿದ್ದ ಪ್ರೇಕ್ಷಕರಿಂದ ಸಾಲು ಸಾಲು ಕರತಾಡನ. ತನ್ನ ಅಪ್ರತಿಮ ಕಂಠಸಿರಿಯ ಮೂಲಕವೇ ‘&ಟಿವಿ’ ಪ್ರಸಿದ್ಧ ಹಿಂದಿ ವಾಹಿನಿಯಲ್ಲಿ ನಡೆಯುತ್ತಿರುವ ‘ದಿ ವಾಯ್ಸ್ ಇಂಡಿಯಾ ಕಿಡ್ಸ್’ ರಿಯಾಲಿಟಿ ಶೋಗೆ ಆಯ್ಕೆಗೊಂಡು ಅಸಂಖ್ಯಾತ ಪ್ರೇಕ್ಷಕರ ಮನಗೆದ್ದಿದ್ದಾಳೆ ಕುಂದಾಪುರ ಮೂಲದ ಪೋರಿ ಸಾನ್ವಿ ವಿ. ಶೆಟ್ಟಿ

ಬೆಂಗಳೂರಿನ ಆರ್.ಎನ್.ಎಸ್ ವಿದ್ಯಾನಿಕೇತನ ಶಾಲೆಯಲ್ಲಿ 7ನೇ ತರಗತಿ ಓದುತ್ತಿರುವ ಸಾನ್ವಿ, ವಿನಯ್ ಶೆಟ್ಟಿ ಹಾಗೂ ಪ್ರೀತಿ ದಂಪತಿಗಳ ಈರ್ವರು ಮಕ್ಕಳಲ್ಲಿ ಹಿರಿಯವಳು. ತಂಗಿ ಆರ್ನಾಳೊಂದಿಗೆ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಆಕೆಯ ತಾಯಿ ಶಂಕರನಾರಾಯಣದವರಾದರೇ, ತಂದೆ ಬ್ರಹ್ಮಾವರದ ಪಡುಬೆಟ್ಟಿನವರು. ಸಾನ್ವಿ ಕುಂದಾಪುರ ವಿನಯ ಆಸ್ಪತ್ರೆಯ ಖ್ಯಾತ ಹೃದಯತಜ್ಞ ಕಿಶೋರ್ ಶೆಟ್ಟಿ ಅವರ ಸೊಸೆ.

ಆಕೆ ಪುಟ್ಟ ಮಗುವಿದ್ದಾಗಲಿಂದಲೂ ಸಂಗೀತವೆಂದರೆ ಪ್ರೀತಿ. ಹಾಡು ಕೇಳಿಸಿದರಷ್ಟೇ ಊಟ, ನಿದ್ರೆ. ಯಾವುದಾದರೂ ಹಾಡು ಕೇಳಿದರೇ ಅದೇ ದಾಟಿಯಲ್ಲಿ ಹಾಡುವ ಗೀಳು. ಸಾನ್ವಿಗೆ ಆರು ವರ್ಷವಿರುವಾಗಲೇ ಆಕೆಯ ಸಂಗೀತಾಭಿರುಚಿಯನ್ನು ಪ್ರೋತ್ಸಾಹಿಸುವ ಸಲುವಾಗಿ ನರಹರಿ ದೀಕ್ಷಿತ್ ಹಾಗೂ ರಾಘವೇಂದ್ರ ಬೀಜಾಡಿ ಅವರ ಬಳಿ ಭಾವಗೀತೆ ತರಬೇತಿಗಾಗಿ ಸೇರಿಸಲಾಯ್ತು. ಕಳೆದ ಮೂರು ವರ್ಷಗಳಿಂದ ಅನನ್ಯ ಭಾರ್ಗವ ಭಟ್ ಅವರಿಂದ ಹಿಂದೂಸ್ಥಾನಿ ಸಂಗೀತವನ್ನು ಕಲಿಯುತ್ತಿದ್ದಾಳೆ. ನಿರ್ಮಲಾ ಮಂಜುನಾಥ ಅವರಿಂದ ಭರತನಾಟ್ಯವನ್ನು ಕಲಿಯುತ್ತಿರುವ ಸಾನ್ವಿ ಅದರಲ್ಲಿಯೂ ವಿಶೇಷ ನೈಪುಣ್ಯತೆ ಸಾಧಿಸಿದ್ದಾಳೆ. ಇದರೊಂದಿಗೆ ತನ್ನ ಓದಿನಲ್ಲಿಯೂ ಮುಂದಿದ್ದಾಳೆ. ಕುಂದಾಪ್ರ ಡಾಟ್ ಕಾಂ ವರದಿ.

ಪುಟ್ಟ ಹುಡುಗಿಯ ಕಂಠ ಸಿರಿಗೆ ಗೋಪಾಲನ್ ಸೂಪರ್ ಸಿಂಗರ್ ಕಾರ್ಯಕ್ರಮದಲ್ಲಿ ನಾಲ್ಕನೇ ತರಗತಿಯಲ್ಲಿ ಇರುವಾಗ ಮೊದಲ ಅವಕಾಶ ದೊರೆತು ಫೈನಲ್ ಹಂತದವರೆಗೆ ಸ್ವರ್ಧಿಸಿದ್ದಳು. ಆ ಬಳಿಕ ಈ ಟಿವಿ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕೂ ಆಯ್ಕೆಯಾಗಿ ಮೆಘಾ ಆಡಿಷನ್ ತನಕ ಆಯ್ಕೆಯಾಗಿದ್ದಳು. ಮುಂದೆ ಜೀ ಕನ್ನಡದ ಸರಿಗಮಪ ಲಿಟ್ಲ್ ಚಾಂಪ್ ಸಿಜನ್-10ರಲ್ಲಿ ಸೆಮಿ ಫೈನಲ್‌ವರೆಗೆ ಸ್ವರ್ಧಿಸಿದ್ದಳು. ಆ ಬಳಿಕ ‘&ಟಿವಿ’ ಯಲ್ಲಿ ದಿ ವಾಯ್ಸ್ ಇಂಡಿಯಾ ಕಿಡ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸುವ ಸುವರ್ಣವಕಾಶ ಆಕೆಗೆ ಒದಗಿಬಂತು. ಈ ಶೋನಲ್ಲಿ ಸಾನ್ವಿ ಟಾಪ್ ಸ್ವರ್ಧಿಗಳ ಪೈಕಿ ಓರ್ವಳಾಗಿ ಮುಂದಿನ ಹಂತಕ್ಕೆ ಮುಂದಡಿ ಇಡುತ್ತಿದ್ದಾಳೆ. ಸೆಪ್ಟಂಬರ್‌ನಿಂದ ಶನಿವಾರ ಹಾಗೂ ಭಾನುವಾರ ಪ್ರಸಾರವಾಗಲಿರುವ ಈ ಶೋನಲ್ಲಿ ಸಾವಿರಾರು ಮಕ್ಕಳು ಭಾಗವಹಿಸಿದ್ದರೂ ತನ್ನ ಸುಮಧುರ ಕಂಠದ ಮೂಲಕವೇ ಆಡಿಷನ್ ನಲ್ಲಿ ಮೆಚ್ಚುಗೆ ಗಳಿಸಿರುವ ಸಾನ್ವಿ, ತೀರ್ಪುಗಾರರು, ತಂಡ ನಾಯಕರು ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದ್ದಾಳೆ. ಆಕೆಯ ಹಾಡಿಗೆ ತೀರ್ಪುಗಾರರು ತಲೆಬಾಗಿದ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿವೆ. ಕುಂದಾಪ್ರ ಡಾಟ್ ಕಾಂ ವರದಿ.

ಕುಂದಾಪುರ ಮೂಲದ ಪ್ರತಿಭೆಯೊಂದು ರಾಷ್ಟ್ರೀಯ ವಾಹಿನಿಯೊಂದರ ಸಂಗೀತ ರಿಯಾಲಿಟಿ ಶೋನಲ್ಲಿ ಭಾಗವಹಿಸಿರುವುದಕ್ಕೆ ನಿಜಕ್ಕೂ ಕುಂದಾಪುರವರಿಗೆ ಮಾತ್ರವಲ್ಲ ಕರ್ನಾಟಕದ ಸಂಗೀತ ಪ್ರೇಮಿಗಳು ಹೆಮ್ಮೆ ಪಡುತ್ತಿದ್ದಾರೆ. ಬಾಲ ಪ್ರತಿಭೆಗೆ ಅಷ್ಟೇ ಪ್ರೀತಿಯಿಂದಲೇ ಹರಸುತ್ತಿದ್ದಾರೆ. ಯಶಸ್ಸು ನಿನ್ನದಾಗಲಿ ಸಾನ್ವಿ.

[quote font_size=”15″ bgcolor=”#ffffff” bcolor=”#6f1382″ arrow=”yes”] * ದಕ್ಷಿಣ ಭಾರದ ಮಕ್ಕಳಿಗೆ ಸ್ವರ್ಧೆಯಲ್ಲಿ ಭಾಗವಹಿಸುವ ಅವಕಾಶ ದೊರೆಯುವುದೇ ಕಡಿಮೆ. ಆದರಲ್ಲೂ ಕುಂದಾಪುರದರಾದ ನಮಗೆ ಅವಕಾಶ ದೊರೆತಿರುವುದು ಖುಷಿ ನೀಡಿದೆ. ಸಾನ್ವಿಗೆ ಸಂಗೀತವೆಂದರೆ ವಿಶೇಷ ಆಸಕ್ತಿ. ನಾನು ಚಿಕ್ಕವಳಿರುವಾಗ ಹಾಡುಗಾರ್ತಿಯಾಗಬೇಕೆಂಬ ಆಸೆಯಿತ್ತು. ಆದರೆ ಅಂದಿನ ಕಾಲದಲ್ಲಿ ಶಂಕರನಾರಾಯಣದಿಂದ ಕುಂದಾಪರಕ್ಕೆ ಬಂದು ತರಬೇತಿ ಪಡೆಯಲು ಸಾಧ್ಯವಿಲ್ಲವೆಂಬ ಕಾರಣಕ್ಕೆ ಆಸೆ ಮನಸಲ್ಲಿಯೇ ಉಳಿಯಿತು. ಆದರೆ ನನ್ನ ಮಗಳು ಹಾಗಾಗಬಾರದು ಎಂಬ ಕಾರಣಕ್ಕೆ ಅವಳಿಗೆ ಚಿಕ್ಕಂದಿನಿಂದಲೇ ಆಕೆಯ ಇಷ್ಟದ ಕ್ಷೇತ್ರದಲ್ಲಿಯೇ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದೇವೆ. ಅವಕಾಶವನ್ನು ಆಕೆ ಚನ್ನಾಗಿ ಬಳಸಿಕೊಳ್ಳುತ್ತಿದ್ದಾಳೆ. – ಪ್ರೀತಿ ವಿನಯ್ ಶೆಟ್ಟಿ, ಸಾನ್ವಿ ತಾಯಿ[/quote]

ಚಿತ್ರ ವಿನ್ಯಾಸ: ಅಭಿನವ್ ಶೆಟ್ಟಿ

Exit mobile version