ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಆ ಕಾರ್ಮಿಕರಿಗೆ ತಾಯಿಯನ್ನು ಅಗಲಿದ ದುಃಖ. ಕೊನೆ ಪಕ್ಷ ಆಕೆಯ ಮುಖವನ್ನಾದರೂ ನೋಡಲು ಸಿಗುತ್ತದೋ ಇಲ್ಲವೋ ಎಂಬ ಆತಂಕ. ಕೈಯಲ್ಲಿದ್ದ ಹಣವೆಲ್ಲ ಖರ್ಚಾಗಿ ಊರಿಗೆ ತೆರಳಲು ಏನೂ ಊಳಿದಿಲ್ಲ. ಕಡೆಗೆ ದುಡ್ಡು ಹೊಂದಿಸಿಕೊಂಡರೂ ತೆರಳಲು ಬಸ್ಸಿಲ್ಲ.
ರಾಷ್ಟ್ರವ್ಯಾಪಿ ನಡೆದ ಕಾರ್ಮಿಕ ಸಂಘಟನೆಗಳ ಮುಷ್ಕರದ ಕರಾಳ ಮುಖವೊಂದು ಕುಂದಾಪರದಲ್ಲಿ ಅನಾವರಣಗೊಂಡ ಪರಿಯಿದು. ತಾಯಿಯನ್ನು ಕಳೆದುಕೊಂಡ ಕಾರ್ಮಿಕ ಹಾಗೂ ಆತನ ಸಂಬಂಧಿಗಳೇ ಮುಷ್ಕರದಿಂದ ಅನುಭವಿಸಿದ ಪರಿಪಾಟಲು ಹೇಳತೀರದು.
ನಂದಿಕೂರಿನಿಂದ ಕುಮಟಾ ಬಳಿಯ ಹಳ್ಳಿಯೊಂದಕ್ಕೆ ತೆರಳಬೇಕಿದ್ದ ಕಾರ್ಮಿಕರು ಬಸ್ಸಿಲ್ಲದ್ದರಿಂದ ಕುಂದಾಪುರದವರೆಗೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಂದಿಳಿದಿದ್ದರು. ಎಕ್ಸ್‌ಪ್ರೆಸ್ ರೈಲಾಗಿದ್ದರಿಂದ ಕುಂದಾಪುರದವರೆಗಷ್ಟೇ ತೆರಳಲು ಹಣವಿದ್ದುದರಿಂದ ಅಲ್ಲಿಯ ತನಕವಷ್ಟೇ ಟಿಕೇಟ್ ಮಾಡಿದ್ದರು. ಅದೇ ರೈಲಿನಲ್ಲಿ ಕುಮಟಾ ವರೆಗೆ ತೆರಳಬಹುದಿದ್ದರೂ ಸಹ ನೋವಿನಲ್ಲೂ ಕಾನೂನು ಪಾಲಿಸುವುದನ್ನು ಆ ಕಾರ್ಮಿಕರು ಮರೆತಿರಲಿಲ್ಲ. ಬಸ್ಸಿಗಾಗಿ ಹೊಂದಿಕೊಂಡಿದ್ದ ಹಣವೂ ಖರ್ಚಾಗಿ ಹೋಗಿತ್ತು. ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಇಳಿದು ಅಲ್ಲಿಂದ ನಡೆದು ಶಾಸ್ತ್ರೀವೃತ್ತದ ತನಕ ಬಂದರೂ ಮುಷ್ಕರದ ಹಿನ್ನೆಲೆಯಲ್ಲಿ ಯಾವೊಂದು ಬಸ್ಸು ಸಂಚರಿಸುತ್ತಿರಲಿಲ್ಲ. ಅತ್ತ ತೆರಳುತ್ತಿದ್ದ ಕೆಲವೊಂದು ಖಾಸಗಿ ವಾಹನಗಳೂ ನಿಲ್ಲಿಸುತ್ತಿರಲಿಲ್ಲ. ಕೈಯಲ್ಲಿ ಹಣವೂ ಇಲ್ಲದ್ದರಿಂದ ಸಾಧ್ಯವಾದಷ್ಟು ದೂರ ನಡೆದು ಸಾಗುವುದೆಂದು ಒಂದು ಹಂತದಲ್ಲಿ ತೀರ್ಮಾನಿಸಿದ್ದರು. ಕೊನೆಗೆ ಪತ್ರಕರ್ತರು ಹಾಗೂ ಪೊಲೀಸರ ಸಹಕಾರದಿಂದ ಊರಿನತ್ತ ಮುಖಮಾಡುವಂತಾಯಿತು.
ಮಾನವೀಯತೆ ಮೆರೆದ ಪತ್ರಕರ್ತರು, ನೆರವಿಗೆ ಬಂದ ಪೊಲೀಸರು:
ಮುಷ್ಕರದ ವರದಿಗೆಂದು ಕುಂದಾಪುರ ಶಾಸ್ತ್ರೀವೃತ್ತದ ಬಳಿ ತೆರಳಿದ್ದ ಪತ್ರಕರ್ತರು, ನಡೆದು ಬರುತ್ತಿದ್ದ ಕಾರ್ಮಿಕರನ್ನು ತಡೆದು ವಿಚಾರಿಸಿದಾಗ ವಸ್ತುಸ್ಥಿತಿ ಅರಿವಿಗೆ ಬಂದಿತ್ತು. ಒಂದು ಹಂತದಲ್ಲಿ ಅಸಹಾಯಕರಾಗಿದ್ದ ಕಾರ್ಮಿಕರಿಗೆ ಊರಿಗೆ ತೆರಳಲು ಹಣವನ್ನು ಹೊಂದಿಸಿದರು. ಪತ್ರಕರ್ತರಾದ ಗಣೇಶ್ ಬೀಜಾಡಿ, ಶ್ರೀಕಾಂತ್ ಹೆಮ್ಮಾಡಿ, ಹರೀಶ್ ತುಂಗಾ ಹಾಗೂ ರಾಘವೇಂದ್ರ ಬಳ್ಕೂರು ಕೂಡಲೇ ಕುಂದಾಪುರ ಪೊಲೀಸ್ ಠಾಣಾಧಿಕಾರಿ ನಾಸಿರ್ ಹುಸೈನ್ ಅವರಿಗೆ ಮಾಹಿತಿ ನೀಡಿದರು. ಕರ್ತವ್ಯದಲ್ಲಿದ್ದ ಎಎಸೈ ಪಾಂಡುರಂಗ ಹಾಗೂ ಪಿಸಿ ರಂಜಿತ್ ಅವರು ಸ್ಥಳಕ್ಕೆ ಧಾಮಿಸಿ ಮೂರು ಲಾರಿಗಳನ್ನು ನಾಲ್ಕು ನಾಲ್ಕು ಜನರಂತೆ ಹನ್ನೆರಡು ಮಂದಿಯನ್ನೂ ಕಳುಹಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ತಾಯಿಯನ್ನು ಕಳೆದುಕೊಂಡ ನೋವಿನ ನಡುವೆ ಊರಿಗೆ ತೆರಳಲು ಹೆಣಗಾಡುತ್ತಿದ್ದ ಮಗ ಹಾಗೂ ಸಂಬಂಧಿಗಳಿಗೆ ಸೂಕ್ತ ಸಮಯದಲ್ಲಿ ಸ್ಪಂದಿಸಿದ ಪತ್ರಕರ್ತರು ಹಾಗೂ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಕುಮಟಾದಿಂದ ಹಳ್ಳಿಯೊಂದಕ್ಕೆ ತೆರಳಬೇಕಿದ್ದ ಕಾರ್ಮಿಕರುಗಳಿಗೆ ಸಂಬಂಧಿಗಳು ವಾಹನ ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ.
[quote font_size=”15″ bgcolor=”#ffffff” bcolor=”#ff0000″ arrow=”yes”]ಮೃತ ಮಡದಿಯನ್ನು ಆಂಬುಲೆನ್ಸ್‌ನಲ್ಲಿ ಸಾಗಿಸಲು ಹಣವಿಲ್ಲದೇ ಗಂಡನೇ ಹೊತ್ತು ಸಾಗುತ್ತಿದ್ದ ಹೃದಯವಿದ್ರಾವಕ ದೃಶ್ಯವನ್ನು ಚಿತ್ರಿಸುತ್ತಿದ್ದ ವರದಿಗಾರರೇ ಸಹಾಯಕ್ಕೆ ಬರಬಹುದಿತ್ತಲ್ಲ ಎಂಬ ಟೀಕೆಗಳ ಬರುತ್ತಿರುವ ಬೆನ್ನಲ್ಲೇ ಪತ್ರಕರ್ತರೂ ಮಾನವೀಯತೆಯನ್ನೆಂದೂ ಮರೆಯುವುದಿಲ್ಲ ಎಂಬುವುದನ್ನು ಇಂತಹ ನಿದರ್ಶನಗಳು ಆಗಾಗ್ಗೆ ಸಾಬೀತು ಪಡಿಸುತ್ತವೆ. [/quote]