Kundapra.com ಕುಂದಾಪ್ರ ಡಾಟ್ ಕಾಂ

ಹುಲ್ಲಿನ ಗುಡಿಸಲಲ್ಲಿ ವಾಸವಿರುವ ಕುಟುಂಬಕ್ಕೆ ಬೇಕಿದೆ ಭದ್ರ ಸೂರು

ಸಾಲಮಾಡಿ ಶೌಚಾಲಯ ಕಟ್ಟಿದ್ದರೂ ಅನುದಾನ ನೀಡಲು ನಾಡ ಪಂಚಾಯತ್ ಹಿಂದೇಟು

ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ತಾಲೂಕಿನಲ್ಲಿ ಮುಖವೆತ್ತರಿಸಿ ನೋಡಬೇಕಾದ ವಸತಿ ಸಮಚ್ಛಯಗಳು ತಲೆಯೆತ್ತುವ ಮಟ್ಟಿಗೆ ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತಿರುವ ಹೊತ್ತಿಗೆ, ಹುಲ್ಲಿನ ಗುಡಿಸಿಲೊಳಕ್ಕೆ ಮಳೆ ಬಿಸಿಲೆನ್ನದೆ ಬದುಕು ಕಂಡುಕೊಂಡಿದೆ ನಾಡ ಗ್ರಾಪಂ ವ್ಯಾಪ್ತಿಯ ಪಡುಕೋಣೆ ಹಡವು ನರಸಿಂಹ ದೇವಾಡಿಗರ ಕುಟುಂಬ.

ಕಳೆದ ಎಪ್ಪತ್ತು ವರ್ಷಗಳಿಂದ ಹಡವು ನರಸಿಂಹ ದೇವಾಡಿಗ ಅವರು ಮಳಿ ಹುಲ್ಲು ಸೂರಿನಡಿಯಲ್ಲಿ ಪತ್ನಿ ಬಾಬಿ ದೇವಾಡಿಗ ಪುತ್ರಿ ಸಮುನಾ ಜೊತೆ ವಾಸ ಮಾಡುತ್ತಿದ್ದಾರೆ. ವಾಸಿಸುವ ಮನೆ, ಹಟ್ಟಿ, ಸ್ನಾನದ ಮನೆ ಎಲ್ಲವೂ ಮಳಿ ಹುಲ್ಲಿಂದ ನಿರ್ಮಿಸಲಾಗಿದೆ. ಕಳೆದ ಒಂದು ವರ್ಷದ ಹಿಂದೆ ವಿದ್ಯುತ್ ಬಂದಿದ್ದು ಬಿಟ್ಟರೆ ಮತ್ತೇನು ಪ್ರಗತಿ ಸಾಧಿಸಿಲ್ಲ. ಮನೆ ಗೋಡೆಯಲ್ಲಿ ಹುತ್ತ ಕಟ್ಟಿದೆ. ಒಳಗಡೆ ಇಲಿ ಹೆಗ್ಗಣಗಳು ತೋಡಿದ ಗುಳಿಗಳಿವೆ. ಹಾವುಗಳಂತೂ ಈ ಮನೆಯ ಖಾಯಂ ಸದಸ್ಯರು. ಮಳೆ ಬಂದರೆ ನೀರೆಲ್ಲಾ ಒಳಗೆ. ಜೋರು ಮಳೆ ಬಂದರೆ ಇವರ ಬೇರೆಯವರ ಮನೆಯೇ ಆಸರೆ. ಒಟ್ಟಾರೆ ಇಂದೋ ನಾಳೆಯೋ ಎನ್ನುವ ಸ್ಥಿತಿಯಲ್ಲಿ ಮನೆಯಿದೆ. ನರಸಿಂಹ ದೇವಾಡಿಗ ಅವರ ಓರ್ವ ಮಗ ಮಂಜುನಾಥ ಬೆಂಗಳೂರು ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಗಂಡ-ಹೆಂಡತಿ ಈರ್ವರೂ ಕೃಷಿ ಕಾರ್ಮಿಕರು. ಮಗಳು ಸಮುನಾ ಪಡುಕೋಣೆ ಹವ್ಯಾಸಿ ಛಾಯಾಗ್ರಾಹಕಿ. ಕುಂದಾಪ್ರ ಡಾಟ್ ಕಾಂ ವರದಿ.

ಸಾಲ ಮಾಡಿ ಕಟ್ಟಿದ ಶೌಚಾಲಯಕ್ಕೆ ಪಂಚಾಯತ್ ಅನುದಾನವಿಲ್ಲ:
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನಿರ್ಮಲ ಭಾರತ್ ಯೋಜನೆಯಲ್ಲಿ ಅಚ್ಚುಕಟ್ಟಾಗಿ ಕಟ್ಟಿಕೊಂಡ ಶೌಚಾಲಯಕ್ಕೂ ನಾಡಾ ಗ್ರಾಪಂ. ಹಣ ನೀಡದೆ ಸತಾಯಿಸುತ್ತಿದೆ. ನರಸಿಂಹ ದೇವಾಡಿಗ ನಿಯಮದಂತೆ ಶೌಚಾಲಯ ಕಟ್ಟಿಕೊಂಡಿದ್ದು, ಪ್ರತೀ ಹಂತದ ಚಿತ್ರ ಹಾಗೂ ದಾಖಲೆ ಗ್ರಾಪಂಗೆ ಒದಗಿಸಿದ್ದಾರೆ. ಆದರೂ ಉಳ್ಳವರ ಮರ್ಜಿಗೆ ಮಣಿದ ನಾಡಾ ಗ್ರಾಪಂ ನರಸಿಂಹ ದೇವಾಡಿಗರ ಶೌಚಾಲಯ ಅನುದಾನ ತಡೆಹಿಡಿದಿದೆ. ನರಸಿಂಹ ದೇವಾಡಿಗ ವಾಸದ ಬಗ್ಗೆ ತಹಸೀಲ್ದಾರ್ ಕೋರ್ಟ್ ದೃಢೀಕರಿಸಲಾಗಿದೆ. ಯಾರೋ ತಗಾದೆ ತೆಗೆಯುತ್ತಾರೆ ಎಂದು ಗ್ರಾಪಂ ಅನುದಾನ ತಡೆಹಿಡಿಯಲು ಅವಕಾಶವಿಲ್ಲ. ಗ್ರಾಪಂ ಏಕಪಕ್ಷೀಯ ನಿಲುವ ತಳೆದು ಫಲಾನುಭವಿಗಳಿಗೆ ಅನುದಾನ ನೀಡಲು ಹಿಂದೇಟು ಎಷ್ಟು ಸರಿ ಎಂಬ ಎಂದು ಮನೆಯವರು ಅಳಲು ತೋಡಿಕೊಂಡಿದ್ದಾರೆ. ಕುಂದಾಪ್ರ ಡಾಟ್ ಕಾಂ ವರದಿ.

* ನಾಡಾ ಗ್ರಾಪಂ ನಮಗೆ ಶೌಚಾಲಯ ಕಟ್ಟಿಕೊಳ್ಳುಲು ಪರವಾನಿಗೆ ಕೊಟ್ಟಿದ್ದು, ಹಂತ, ಹಂತವಾಗಿ ಕಟ್ಟಿದ ಶೌಚಾಯದ ಪೊಟೋ ಸಹಿತ ನಾಡಾ ಗ್ರಾಪಂಗೆ ವರದಿ ಸಲ್ಲಿಸಿದ್ದೇವೆ. ಶೌಚಾಲಯ ನಿರ್ಮಿಸಿ ಎರಡು ವರ್ಷ ಕಳೆದರೂ ಚಿಕ್ಕಾಸು ನಾಡಾ ಗ್ರಾಪಂ ಕೊಟ್ಟಿಲ್ಲ. ತಾಯಿ ಚಿನ್ನ ಅಡವಿಟ್ಟು ಶೌಚಾಲಯ ಕಟ್ಟಿಕೊಂಡಿದ್ದೇವೆ. ಶೌಚಾಲಯಕ್ಕೆ ಗ್ರಾಪಂ ಅನುದಾನ ನೀಡದ ಕಾರಣ ಅಡವಿಟ್ಟ ಚಿನ್ನ ಕೂಡಾ ಕೈತಪ್ಪುವ ಹಂತಕ್ಕೆ ಬಂದಿದೆ. ನಿಯಮದಂತೆ ಶೌಚಾಲಯ ಕಟ್ಟಿಕೊಂಡರೂ ಗ್ರಾಪಂ ಹಣ ನೀಡಿತ್ತಿಲ್ಲ – ಸುಮನಾ ಪಡುಕೋಣೆ, ನರಸಿಂಹ ದೇವಾಡಿಗರ ಪುತ್ರಿ

* ಜೋರು ಮಳೆ ಬಂದರೆ ನಾವು ಬೇರೆಯವರ ಮನೆ ಆಶ್ರಯ ಪಡೆಯಬೇಕು. ಮನೆ ಒಳಗೆ ಹಾವು ಬಂದರೆ ವಾರಗಟ್ಟಲೆ ಇರುತ್ತದೆ. ಹಾವು ಹಿಡಿದು ಬೇರೆ ಕಡೆ ಬಿಟ್ಟು ಬರಬೇಕು. ಹುಲ್ಲು ಮಾಡಿಂದ ರಾತ್ರಿ ಹಾವು ಮೈಮೇಲೆ ಬೇಳಬಾರದು ಎಂಬ ಉದ್ದೇಶದಲ್ಲಿ ಮನೆ ಮಾಡಿನ ಒಳಛಾವಣಿಯಲ್ಲಿ ಸೀರೆ ಹಾಗೆ ಕಟ್ಟಿಲಾಗಿದೆ. ಇಷ್ಟೆಲ್ಲಾ ಕಷ್ಟಗಳ ನಡುವೆ ಶೌಚಾಲಯ ಕಟ್ಟಿಕೊಂಡಿದ್ದರೂ, ಗ್ರಾಪಂ ಹಣ ನೀಡಿಲ್ಲ. ಜೀವನ ನಡೆಸುವುದೇ ಕಷ್ಟವಾಗಿರುವಾಗ ಕಷ್ಟಪಟ್ಟು ಕಟ್ಟಿದ ಶೌಚಾಲಯಕ್ಕೆ ಹಣ ನೀಡದಿರುವುದು ಯಾವ ನ್ಯಾಯ. – ಬಾಬಿ ದೇವಾಡಿಗ, ನರಸಿಂಹ ದೇವಾಡಿಗರ ಪತ್ನಿ

Exit mobile version