ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಯಕ್ಷಗಾನ ತಿರುಗಾಟ ಆರಂಭಗೊಂಡು ದಿನಕಳೆಯುತ್ತಿದ್ದರೂ ಕುಂದಾಪುರದ ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನ ನೋಡುವ ಭಾಗ್ಯವಿಲ್ಲ. ಯಾರದ್ದೋ ಸ್ವಪ್ರತಿಷ್ಠೆಗೆ ವಿಶ್ವಮಾನ್ಯ ಕಲೆಯ ನೆಲೆಯಲ್ಲಿಯೇ ಕಂಟಕ ತಂದಿಟ್ಟಿರುವುದು ಯಕ್ಷಪ್ರಿಯರನ್ನು ನಿರಾಶೆಗೊಳಿಸಿದೆ.
ವಾಸ್ತವವಾಗಿ ಯಕ್ಷಗಾನ ಪ್ರದರ್ಶನದಿಂದ ಯಾರಿಗೆ ತೊಂದರೆಯಾಗುವುದೆಂಬ ಕಾರಣ ನೀಡಿದ್ದರೋ ಅಲ್ಲಿನ ಪರಿಸ್ಥಿತಿ ಮಾತ್ರ ಚಿಂತಾಜನಕ. ಮೈದಾನದ ಅಕ್ಕಪಕ್ಕವಿರುವ ಹಾಸ್ಟೆಲ್‌ಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ಮೈದಾನದಲ್ಲಿ ನಡೆಯುವ ಕಾರ್ಯಕ್ರಮದ ಬಗ್ಗೆ ಕೆಲವು ಮಹನೀಯರಿಗೆ ಚಿಂತೆ ಹತ್ತಿಕೊಂಡಿದ್ದು ಒಟ್ಟಿನಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿಪಡಿಸುತ್ತಿರುವವರ ಹಿಂದೆ ಸ್ವಹಿತಾಸ್ತಿಯೂ ಅಡಗಿರಬಹುದೆಂಭ ಆರೋಪ ಕೇಳಿಬರುತ್ತಿದೆ.
ಯಕ್ಷಗಾನಕ್ಕೆ ವಿರೋಧಿಸುವವರು ಹಾಸ್ಟೆಲ್ ಪರಿಸ್ಥಿತಿ ಅವಲೋಕಿಸಿದ್ದಾರೆ?
ಶಾಲೆ, ಹಾಸ್ಟೆಲ್, ಸ್ವಚ್ಛತೆ, ಭದ್ರತೆಯನ್ನು ಮುಂದಿಟ್ಟುಕೊಂಡು ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನಿರಾಕರಣೆ ಮಾಡುತ್ತಿರುವವರು ಒಮ್ಮೆ ಹಾಸ್ಟಲ್‌ಗೆ ಭೇಟಿ ನೀಡಿ ಪರೀಕ್ಷಿಸಲಿ. ಎಂತಾ ಪರಿಸರದಲ್ಲಿ ಮಕ್ಕಳು ದಿನಕಳೆಯುತ್ತಿದ್ದಾರೆ ಎನ್ನುವ ಕನಿಷ್ಟ ಅರಿವಾದರೂ ಮೂಡುತ್ತದೆ.
ಹಾಸ್ಟೆಲ್ ಮೂಲಭೂತ ಸೌಲಭ್ಯ, ಸ್ವಚ್ಛತೆ ಬಗ್ಗೆ ಕಾಳಜಿಯಿದ್ದರೆ ಮೊದಲು ಹಾಸ್ಟೆಲ್ ವ್ಯವಸ್ಥೆ ಸರಿಪಡಿಸಲಿ. ಹಾಸ್ಟೆಲ್ ಮುಂದಿರುವ ಪಾಯಿಖಾನೆ ಹೊಂಡ ಅಸಹ್ಯ ವಾಸನೆಯಿಂದ ಹಾಸ್ಟೆಲ್ ವಿದ್ಯಾರ್ಥಿಗಳು ನೆಮ್ಮದಿ ತುತ್ತು ಬಾಯಿಗಿಡಲಾಗುತ್ತಿಲ್ಲ ಎನ್ನೋದು ಯಕ್ಷಗಾನ ಪ್ರದರ್ಶನ ವಿರೋಧಿಸುವರ ಗಮನದಲ್ಲಿಲ್ಲ. ರಸ್ತೆ ಪಕ್ಕದ ಚರಂಡಿಯಲ್ಲಿ ಹರಿಯುವ ಹಾಸ್ಟೆಲ್ ತ್ಯಾಜ್ಯ ಪರಿಸರ ವಾಸಿಗಳ ಗಂಟಲುಗಾಣ. ನೆಹರೂ ಮೈದಾನ ವಲಸೆ ಕಾರ್ಮಿಕರ ಅಡ್ಡೆಯಾಗಿ, ಪರಿಸರ ಹಾಳಾಗುವುದರ ಬಗ್ಗೆ ಮಾತನಾಡಲಿ. ರಾತ್ರಿ ಮೈದಾನದ ಸುತ್ತಾ ಹಾಗೂ ಶಾಲೆ ಕಟ್ಟೆಯಲ್ಲಿ ಮಲಗುವ ಕಾರ್ಮಿಕರ ಬಗ್ಗೆ ಏಕೆ ತುಟಿ ಬಿಚ್ಚುತ್ತಿಲ್ಲ. ವಾರದಲ್ಲಿ ಒಂದು ದಿನ ನೆಹರೂ ಮೈದಾನದಲ್ಲಿ ನಡೆಯುವ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಪಡಿಸೋದು ಸರಿಯಾ ಎನ್ನುವ ಯಕ್ಷ ಪ್ರೇಮಿಗಳ ಪ್ರಶ್ನೆಗೆ ತಾಲೂಕು ಆಡಳಿತ ಉತ್ತರಿಸ ಬೇಕಿದೆ. ಕುಂದಾಪ್ರ ಡಾಟ್ ಕಾಂ ವರದಿ.
ವಲಸೆ ಕಾರ್ಮಿಕರು ವಾಸವೂ ಇಲ್ಲಿಯೇ:
ಕುಂದಾಪುರ ನೆಹರೂ ಮೈದಾನ ಪಕ್ಕ ರಾಷ್ಟ್ರೀಯ ಹೆದ್ದಾರಿ ಒಳಚರಂಡಿ ಮೇಲೆ ಐನೂರಕ್ಕೂ ಹೆಚ್ಚು ಜನ ರಾತ್ರಿ ಮಲಗುತ್ತಾರೆ. ನೆಹರೂ ಮೈದಾನದಲ್ಲಿರುವ ಶಾಲೆ ಜಗುಲಿ, ಸಾರ್ವಜನಿಕ ಗ್ರಂಥಾಲಯ ವಲಸೆ ಕಾರ್ಮಿಕರ ವಿಶ್ರಾಂತಿ ತಾಣ. ಬಾಲಕರ ಹಾಸ್ಟೆಲ್ ಎದುರೇ ಅಡುಗೆ, ಊಟ, ಸ್ನಾನ ಎಲ್ಲಾ ನಡೆಯುತ್ತದೆ. ಇನ್ನೂ ನೆಹರೂ ಮೈದಾನದಲ್ಲಿ ಮೂಗು ಮುಚ್ಚಿ ತಿರುಗಾಡಬೇಕು. ಇಷ್ಟೆಲ್ಲಾ ಅಪಸೌವ್ಯಗಳ ಪರಿಗಣನೆಗೆ ತೆಗೆದುಕೊಳ್ಳದೇ ತಮ್ಮ ಮಣ್ಣಿನ ಕಲೆ ಯಕ್ಷಗಾನ ಪ್ರದರ್ಶನಕ್ಕೆ ಅಡ್ಡಿ ಪಡಿಸೋದು ಸರಿಯಾ?
ಯಕ್ಷಗಾನ ಪ್ರದರ್ಶನ ಸಂದರ್ಭ ಹಿಂದುಳಿದ ವಿದ್ಯಾರ್ಥಿನಿಯರು ಹಾಸ್ಟಲ್ ಇದೆ. ಯಕ್ಷಗಾನ ಪ್ರದರ್ಶನದಿಂದ ಸಮಸ್ಯೆ ಆಗುತ್ತೆ ಎನ್ನೋ ಕಾರಣ ನೀಡುವವರು ಇದೂವರಗೆ ಎಲ್ಲಿಯಾದರೂ ಅಹಿತಕರ ಘಟನೆ ನಡೆದ ಬಗ್ಗೆ ರುಜುವಾತು ಮಾಡಲಿ. ಆಗ ಬೇಕಾದರೆ ಒಪ್ಪಿಕೊಳ್ಳಬಹುದು. ಇನ್ನೂ ಹಾಸ್ಟೆಲ್ ಮುಂದೆ ತ್ಯಾಜ್ಯ, ಮಣ್ಣು, ಮಸಿ ಇನ್ನಿತರ ಕಸಕಡ್ಡಿಗಳ ರಾಶಿ ಬಿದ್ದಿದೆಯಲ್ಲಾ ಅದರ ಸ್ವಚ್ಛತೆ ಬಗ್ಗೆ ತಾಲೂಕು ಆಡಳಿತ ಮುಂದಾಗೋದು ಬಿಟ್ಟು ಯಾರನ್ನೋ ತೃಪ್ತಿ ಪಡಿಸುವ ನಿಟ್ಟಿನಲ್ಲಿ ಯಕ್ಷಗಾನ ಪ್ರದರ್ಶನ ನಿರಾಕರಿಸೋದು ಸರಿಯಾ ಎನ್ನೋದು ಯಕ್ಷಪ್ರಿಯರ ಪ್ರಶ್ನೆ. ಕುಂದಾಪ್ರ ಡಾಟ್ ಕಾಂ ವರದಿ.
ಯಕ್ಷಗಾನ ವಾರದಲ್ಲಿ ಒಂದು ದಿನ ನಡೆದರೆ, ಇದೇ ಗಾಂಧಿ ಮೈದಾನದಲ್ಲಿ ತಿಂಗಳುಗಟ್ಟಲೆ ಜಂಡಾ ಹೂಡಲು ಅವಕಾಶ ಕೊಟ್ಟು, ಇಡೀ ನೆಹರೂ ಮೈದಾನ ಮೈಯಲ್ಲಾ ಹೊಂಡಾ ತೆಗೆದು ಕೊನೆಗೆ ಮೈದಾನ ಸ್ವಚ್ಛಮಾಡದೆ, ಹೊಂಡಾಗುಂಡಿ ಹಾಗೆ ಉಳಿಸಿಹೋಗುತ್ತಿದ್ದರೂ, ಡೊಂಬರಾಟಕ್ಕೆ ನೆಹರೂ ಮೈದಾನದಲ್ಲಿ ಅವಕಾಶ ನೀಡಲಾಗುತ್ತದೆ. ಟೆಂಟಿಗಾಗಿ ತೆಗೆದ ಹೊಂಡ ಮರುದಿನ ಮುಚ್ಚಿ ಪರಿಸರ ಸ್ಚಚ್ಛತೆಗೆ ೧ ಸಾವಿರ ಶುಲ್ಕ ಕೊಡುವ ಯಕ್ಷಗಾನ ಮೇಳಕ್ಕೆ ಅವಕಾಶ ನಿರಾಕರಣೆ ಮೂಲಕ ನಮ್ಮ ಕಲೆ ಅವಮಾನಿಸಲಾಗುತ್ತದೆ. ಹಿಂದೆ ಹೇಗೆ ನೆಹರೂ ಮೈದಾನದಲ್ಲಿ ಯಕ್ಷಗಾನ ನಡೆಯುತ್ತಿತ್ತೋ ಅದನ್ನು ಮುಂದುವರಿಸಬೇಕು. ಒಮ್ಮೆ ಯಕ್ಷಗಾನಕ್ಕೆ ಅವಕಾಶ ನೀಡದಿದ್ದರೆ ಯಾವ ಕಾರ‍್ಯಕ್ರಮಕ್ಕೂ ನೆಹರೂ ಮೈದಾನ ನೀಡಬಾರದು ಎಂಬ ಮಾತುಗಳೂ ಕೇಳಿಬರುತ್ತಿದೆ. © ಕುಂದಾಪ್ರ ಡಾಟ್ ಕಾಂ.
ಇದನ್ನೂ ಓದಿ
► ನೆಹರೂ ಮೈದಾನದಲ್ಲಿ ಯಕ್ಷಗಾನ ಪ್ರದರ್ಶನಕ್ಕೆ ದೊರೆಯುತ್ತಿಲ್ಲ ಅನುಮತಿ – http://kundapraa.com/?p=18845
► ಯಕ್ಷಗಾನ ಪ್ರದಶನಕ್ಕೆ ಆಗ್ರಹಿಸಿ ಪತ್ರ ಚಳವಳಿ- http://kundapraa.com/?p=18870
► ಯಕ್ಷಗಾನ ಪ್ರದರ್ಶನಕ್ಕೆ ಪರವಾನಿಗೆ ನೀಡದಿದ್ದರೆ ಕಾನೂನು ಸಮರಕ್ಕೂ ಸಿದ್ಧ: ಜಯಪ್ರಕಾಶ್ ಹೆಗ್ಡೆ – http://kundapraa.com/?p=18876
► ಯಕ್ಷಗಾನ ಪ್ರದರ್ಶನ ತಡೆಹಿಡಿದಿರುವ ಬಗ್ಗೆ ಕುಂದಾಪುರದ ಜನಪ್ರತಿನಿಧಿಗಳು, ಗಣ್ಯರು ಏನಂತಾರೆ?- http://kundapraa.com/?p=18870
Kundapura nehru maidan became living place for Migrant labor–hostels around suffering for basic infrastructure.