Kundapra.com ಕುಂದಾಪ್ರ ಡಾಟ್ ಕಾಂ

ಎಲ್ಲಾ ಆಯಾಮಗಳಲ್ಲಿ ತೊಡಗಿಸಿಕೊಂಡ ಬಿ. ಎಂ. ಸುಕುಮಾರ ಶೆಟ್ಟರದ್ದು ಅಸಾಧಾರಣ ವ್ಯಕ್ತಿತ್ವ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಮಾಜದ ಏಳಿಗೆಗಾಗಿ ತೊಡಗಿಸಿಕೊಂಡ ಉತ್ಕೃಷ್ಟ ವ್ಯಕ್ತಿಗಳನ್ನು ಸನ್ಮಾನಿಸಿದರೆ ಅವರನ್ನು ಹುರಿದುಂಬಿಸಿದಂತಾಗುವುದಲ್ಲದೇ ಮತ್ತಷ್ಟು ಸಮಾಜಮುಖಿಯಾಗಿ ತೊಡಗಿಸಿಕೊಳ್ಳಲು ಸಹಕಾರಿಯಾಗುತ್ತದೆ. ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಅವರು ಎಲ್ಲಾ ಆಯಾಮಗಳಲ್ಲಿಯೂ ತೊಡಗಿಸಿಕೊಂಡ ಅಸಾಧಾರಣ ವ್ಯಕ್ತಿಯಾಗಿದ್ದು, ಶ್ರೇಷ್ಠ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಬೆಳೆದಿದ್ದಾರೆ. ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಿ ಬಡ ವಿದ್ಯಾರ್ಥಿಗಳಿಗೆ ನೆರವಾಗುತ್ತಿರುವ ಅವರು ಭಗವಂತ ಮೆಚ್ಚುವ ಕೆಲಸ ಮಾಡಿದ್ದಾರೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ| ಎನ್. ವಿನಯ್ ಹೆಗ್ಡೆ ಹೇಳಿದರು.

ಅವರು ಡಿ.15ರಂದು ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ಕುಂದಾಪುರ ಎಜುಕೇಶನ್ ಸೊಸೈರಿ ರಿ. ಹಾಗೂ ಅಭಿಮಾನಿ ಬಳಗದವರಿಂದ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಬೈಂದೂರು ಶಾಸಕ ಬಿ. ಎಮ್. ಸುಕುಮಾರ ಶೆಟ್ಟಿ ಅವರನ್ನು ಸನ್ಮಾನಿಸಿ ಮಾತನಾಡಿದರು.

ಮಣಿಪಾಲ ವಿವಿ ಸಹ ಕುಲಾಧಿಪತಿ ಡಾ. ಎಚ್. ಎಸ್ ಬಲ್ಲಾಳ್ ಮಾತನಾಡಿ ಸುಕುಮಾರ ಶೆಟ್ಟರು ಬಹುಮುಖ ಪ್ರತಿಭೆ ವ್ಯಕ್ತಿ. ಎಲ್ಲಾ ಕ್ಷೇತ್ರಗಳಲ್ಲಿಯೂ ತೊಡಗಿಸಿಕೊಂಡು ಯಶಸ್ವಿಯಾದವರು. ತಮ್ಮ ಶಿಕ್ಷಣ ಸಂಸ್ಥೆಗಳ ಮೂಲಕ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಒಳ್ಳೆಯ ಶಿಕ್ಷಣ ನೀಡುತ್ತಿದ್ದಾರೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಸದ ಬಿ.ವೈ ರಾಘವೇಂದ್ರ ಮಾತನಾಡಿ ಪರಿಶ್ರಮ ಇದ್ದಾಗ ಮಾತ್ರ ಯಶಸ್ಸಿನ ಕಡೆಗೆ ಸಾಗಲು ಸಾಧ್ಯ ಎಂಬುದನ್ನು ಸುಕುಮಾರ ಶೆಟ್ಟಿ ಅವರು ತೋರಿಸಿಕೊಟ್ಟಿದ್ದಾರೆ. ಬದುಕಿನ ಹಸಿವು, ಶೈಕ್ಷಣಿಕ ಹಸಿವನ್ನು ನೀಗಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ ಎಂದರು.

ಸನ್ಮಾನ ಸ್ವೀಕರಿಸಿದ ಬೈಂದೂರು ಶಾಸಕ, ಕುಂದಾಪುರ ಎಜುಕೇಶನ್ ಸೊಸೈಟಿ ಅಧ್ಯಕ್ಷ ಬಿ. ಎಮ್. ಸುಕುಮಾರ ಶೆಟ್ಟಿ ಮಾತನಾಡಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರಕಿಸಿಕೊಡುವ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳ ಉನ್ನತಿಕರಣಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡಿದ್ದೇನೆ. ಶಾಸಕನಾದ ಬಳಿಕ ಕ್ಷೇತ್ರ ಜನರ ಮೂಲಭೂತ ಸೌಕರ್ಯಗಳನ್ನು ಪೂರೈಸಿಕೊಡುವ ನಿಟ್ಟಿನಲ್ಲಿ ನಿರಂತವಾಗಿ ತೊಡಗಿಸಿಕೊಂಡಿದ್ದೇನೆ. ಜಿಲ್ಲೆಯಲ್ಲಿರುವ ವಸತಿ ನಿಲಯಗಳ ಅನಾನುಕೂಲತೆ ಹಾಗೂ ಅಗತ್ಯತೆಯನ್ನು ಈಗಾಗಲೇ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸುವ ಕುರಿತಾಗಿ ಬಿಜೆಪಿ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚಿತ್ರಣವನ್ನು ಬಿಚ್ಚಿಟ್ಟಿದ್ದೇನೆ ಎಂದರು.

ಮಾಜಿ ಶಾಸಕ ಬಿ. ಅಪ್ಪಣ್ಣ ಹೆಗ್ಡೆ, ಮಣಿಪಾಲ್ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಆಡಳಿತಾಧಿಕಾರಿ ಡಾ. ಎಚ್. ಶಾಂತಾರಾಮ್, ಸಿಇಎಸ್ ಸದಸ್ಯೆ ವಿನತಾ ಪಿ. ರೈ ಮೊದಲಾದವರು ವೇದಿಕೆಯಲ್ಲಿದ್ದರು.

ಕುಂದಾಪುರ ಎಜುಕೇಶನ್ ಸೊಸೈಟಿ ಮ್ಯಾನೇಜಿಂಗ್ ಕಮಿಟಿ ಸದಸ್ಯ ಡಾ. ಎಂ. ವಿ. ಕುಲಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಕೆ. ಸೀತಾರಾಮ ನಕ್ಕತ್ತಾಯ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅತಿಥಿಗಳನ್ನು ಜೊತೆ ಕಾರ್ಯದರ್ಶಿ ಕೆ. ಸುಧಾಕರ ಶೆಟ್ಟಿ ಬಾಂಡ್ಯ, ಬಿ. ಅರುಣ್ ಕುಮಾರ್ ಶೆಟ್ಟಿ ಪರಿಚಯಿಸಿದರು. ಉಪಾಧ್ಯಕ್ಷ ಎ.ಪಿ. ಮಿತ್ತಂತಾಯ ಸನ್ಮಾನ ಪತ್ರ ವಾಚಿಸಿದರು. ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ನಿರ್ದೇಶಕ ದೋಮ ಚಂದ್ರಶೇಖರ್ ಧನ್ಯವಾದಗೈದರು. ಇಂಗ್ಲೀಷ್ ಉಪನ್ಯಾಸಕಿ ಅಮೃತಾ ಕಾರ್ಯಕ್ರಮ ನಿರೂಪಿಸಿದರು.

 

Exit mobile version