ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ:ಸತತ ಪ್ರಯತ್ನವೇ ಗೆಲುವಿನ ಮೂಲ. ಸೋತರೂ ಕಠಿಣ ಪರಿಶ್ರಮದಿಂದ ಮತ್ತೆ ಪ್ರಯತ್ನಿಸಿ ಗೆದ್ದಾಗ ಆ ಗೆಲುವಿಗೆ ಕಾರಣರಾದ ಶಿಕ್ಷಕರನ್ನು ಮರೆಯದಿರಿ, ನಿಮ್ಮ ಯಶಸ್ಸನ್ನು ಬಯಸುವ ಶಿಕ್ಷಕರ ಮಾರ್ಗದರ್ಶನ ವಿದ್ಯಾರ್ಥಿಗಳಿಗೆ ದಾರಿದೀಪವಾಗಲಿ ಎಂದು ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳದ ಪದವಿ ಪೂರ್ವ ಕಾಲೇಜಿನ ಸಂಖ್ಯಾಶಾಸ್ತ್ರ ಉಪನ್ಯಾಸಕರಾದ ಪ್ರಭಾಕರ್ ಶೆಟ್ಟಿಗಾರ್ ಹೇಳಿದರು.
ಅವರು ಇಲ್ಲಿನ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಆಯೋಜಿಸಿದ ಶಿಕ್ಷಕರ ದಿನಾಚರಣೆಯ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಇನ್ನೋರ್ವ ಮುಖ್ಯ ಅತಿಥಿ ಆರ್.ಎನ್. ಶೆಟ್ಟಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಉಪನ್ಯಾಸಕಿ ಸುಷ್ಮಾ ಶೆಣೈ ಮಾತನಾಡಿ, ಶೈಕ್ಷಣಿಕ ಕಾಳಜಿಯೊಂದಿಗೆ ವಿದ್ಯಾರ್ಥಿಗಳನ್ನು ಸಂಸ್ಕಾರಯುತ ಬದುಕಿಗೆ ಅಣಿಗೊಳಿಸುವುದು ಶಿಕ್ಷಕರ ಆದ್ಯ ಕರ್ತವ್ಯ ಎಂದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲರಾದ ಕೆ.ಉಮೇಶ್ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿ, ವಿದ್ಯಾರ್ಥಿಗಳು ಶಿಕ್ಷಕರು ಹೇಳುವ ಪಾಠವನ್ನಷ್ಟೇ ಅರಿತರೆ ಸಾಲದು, ಅವರನ್ನು ಗೌರವಿಸಿ ಬದುಕುವಂತಾಗಬೇಕು ಎಂದರು.
ಕನ್ನಡ ಸಹಾಯಕ ಪ್ರಾಧ್ಯಾಪಕ ಸುಕುಮಾರ್ ಶೆಟ್ಟಿ ಹಾಗೂ ವಿದ್ಯಾರ್ಥಿಗಳಾದ ಪೂಜಾ ಆಚಾರ್, ಶ್ರೇಯಾ ಖಾರ್ವಿ, ಸಚಿನ್, ಅನಂತೇಶ್ವರ್, ಶ್ರೀಶಾಂತ್, ಸ್ನೇಹಾ, ಸೃಜನ್ ಇವರಿಂದ ಜುಗಲ್ ಬಂಧಿ ಹಾಡುಗಾರಿಕೆ ನಡೆಯಿತು.
ಕನ್ನಡ ಸಹಾಯಕ ಪ್ರಾಧ್ಯಾಪಕಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಉಪಪ್ರಾಂಶುಪಾಲರಾದ ಡಾ| ಚೇತನ್ ಶೆಟ್ಟಿ ಕೋವಾಡಿ ಪ್ರಾಸ್ತಾವಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ರಕ್ಷಿತ್ ರಾವ್ ಗುಜ್ಜಾಡಿ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಸುಹಾಸ್ ಜೆಟ್ಟಿಮನೆ ವಂದಿಸಿದರು.