Kundapra.com ಕುಂದಾಪ್ರ ಡಾಟ್ ಕಾಂ

ಕೋಟ ಯುವಕರ ಹತ್ಯೆ ಪ್ರಕರಣ: ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ,ಫೆ.3: ಮಣೂರಿನ ಚಿಕ್ಕನಕೆರೆಯಲ್ಲಿ ಜ. 26ರ ರಾತ್ರಿ ನಡೆದ ಅಮಾಯಕ ಯುವಕರಿಬ್ಬರ ಕೊಲೆ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿ ಕೋಟ ಬಸ್ ನಿಲ್ದಾಣ ಸಮೀಪದ ಸಂತೆ ಮಾರ್ಕೆಟ್ ಹತ್ತಿರ ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು.

ವಿಧಾನ ಪರಿಷತ್ ವಿಪಕ್ಷ ಮುಖಂಡ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಇದುವರೆಗೂ ನಾನು ಏನು ಮಾತನಾಡಿಲ್ಲ. ನನ್ನೂರ ಇಬ್ಬರು ಹುಡುಗರ ಕೊಲೆ ನಡೆದಿದ್ದು ಬಹಳಷ್ಟು ನೋವು ನೀಡಿದೆ. ಪೊಲೀಸ್ ತನಿಖೆಗೆ ತೊಂದರೆಯಾಗಬಾರದೆಂದು ಯಾವುದೇ ಹೇಳಿಕೆ ನೀಡದೆ ಸುಮ್ಮನಿದ್ದೇನೆ. ಹೀಗಿದ್ದರೂ ಪೊಲೀಸರು ಇದುವರೆಗೂ ಆರೋಪಿಗಳನ್ನು ಹಿಡಿದಿಲ್ಲ. ಫೆ.೬ರವರೆಗೆ ನಾನು ಮಾತನಾಡಲ್ಲ. ಅಷ್ಟರವರೆಗೆ ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ನಾನು ಮುಖಮಂತ್ರಿಗಳಲ್ಲಿ ಈ ಬಗ್ಗೆ ಚರ್ಚಿಸಲಿದ್ದೇನೆ ಎಂದರು.

ರಾಕೇಶ್ ಮಲ್ಲಿ ಮಾತನಾಡಿ ಯತೀಶ್ ನನ್ನೊಂದಿಗಿದ್ದ ಒಳ್ಳೆಯ ಹುಡುಗ. ಇಬ್ಬರು ಹುಡುಗರ ಕೊಲೆ ಖಂಡನೀಯವಾದುದು. ಪೊಲೀಸರು ಆರೋಪಿಗಳನ್ನು ತಕ್ಷಣ ಹಿಡಿಯಬೇಕು. ನಾನು ಸರಕಾರದ ಮಟ್ಟದಲ್ಲಿ ಮಾತನಾಡಲಿದ್ದೇನೆ ಎಂದರು.

ನ್ಯಾಯವಾದಿ ಶ್ಯಾಮ ಸುಂದರ ನಾರಿ, ಸಾಸ್ತಾನ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಪ್ರತಾಪ್‌ಶೆಟ್ಟಿ, ಭಗತ್ ಸಿಂಗ್ ವೇದಿಕೆ ಕುಂದಾಪುರ ತಾಲೂಕು ಅಧ್ಯಕ್ಷ ಧನು, ದಿನೇಶ್ ಗಾಣಿಗ ಕೋಟ, ಶಿವರಾಂ, ಎಂ. ಸಂಜೀವ ಸಾಲಿಗ್ರಾಮ, ರಾಜೇಶ್ ಕಾವೇರಿ ಕೊಲೆ ಕೃತ್ಯ ಖಂಡಿಸಿ, ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ತಾಲೂಕು ಪಂಚಾಯತ್ ಸದಸ್ಯೆ ಲಲಿತಾ ಪೂಜಾರಿ, ರೋಟರಿ ಕ್ಲಬ್ ಕೋಟ ಸಿಟಿಯ ಸುಬ್ರಾಯ ಆಚಾರ್ಯ, ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷ ಸತೀಶ್ ಪೂಜಾರಿ, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ವನಿತಾ ಶ್ರೀಧರ ಆಚಾರ್ಯ, ಕೋಟ್ತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ರಘು ತಿಂಗಳಾಯ, ಮಾಜಿ ಅಧ್ಯಕ್ಷ ನ್ಯಾಯವಾದಿ ಪ್ರಮೋದ್ ಹಂದೆ, ಕಿಶೋರ್ ಕುಂದಾಪುರ, ಅರುಣ ಕುಂದರ್ ಕಲ್ಗದ್ದೆ, ಐರೋಡಿ ವಿಠಲ ಪೂಜಾರಿ, ಸಂದೀಪ್ ಕುಂದರ್ ಕೋಡಿ, ಕೃಷ್ಣಮೂರ್ತಿ ಸಾಲಿಗ್ರಾಮ, ಲಿಯಾಖತ್ ಆಲಿ ಇನ್ನಿತರ ಪ್ರಮುಖರು ಭಾಗವಹಿಸಿದ್ದರು. ಕೊಲೆ ಆರೋಪಿಗಳಾದ ರೆಡ್ಡಿ ಸಹೋದರರನ್ನು ಶೀಘ್ರದಲ್ಲೇ ಬಂಧಿಸಬೇಕು. ಮತ್ತು ಅವರನ್ನು ಕುಟುಂಬ ಸಮೇತರಾಗಿ ಗಡಿಪಾರು ಮಾಡಬೇಕೆಂಬ ಎಂಬ ಒತ್ತಾಯ ಸಭೆಯಲ್ಲಿ ಕೇಳಿ ಬಂತು. ಇದೇ ಸಂದರ್ಭ ಕೊಲೆಗೀಡಾದ ಯುವಕರ ಕುಟುಂಬಕ್ಕೆ ರೂ. 48 ಸಾವಿರ ಮೊತ್ತ ಸಂಗ್ರಹವಾಯಿತು. 25 ಕ್ಕೂ ಅಧಿಕ ಸ್ಥಳೀಯ ಸಂಘ ಸಂಸ್ಥೆಗಳು ಭಾಗವಹಿಸಿದ್ದು ಸಾರ್ವಜನಿಕರು ಕೂಡ ಭಾಗವಹಿಸಿದ್ದರು.

ಪ್ರತಿಭಟನಾ ಸಭೆಯ ಕೊನೆಯಲ್ಲಿ ಉಡುಪಿ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗಳು ಭಾಗವಹಿಸಿ ಮನವಿ ಸ್ವೀಕರಿಸಿದರು. ಅವರು ಮಾತನಾಡಿ ಆರೋಪಿಗಳ ಬಂಧನಕ್ಕೆ 4 ತಂಡವನ್ನು ರಚಿಸಿ ಪ್ರಯತ್ನ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಎಲ್ಲಾ ಆರೋಪಿಗಳನ್ನು ಬಂಧಿಸಿ ಅವರಿಗೆ ತಕ್ಕ ಶಿಕ್ಷೆ ಆಗುವಂತೆ ಮಾಡಲಾಗುವುದು ಎಂದರು.

► ಕೋಟದಲ್ಲಿ ಯುವಕರಿಬ್ಬರ ಬರ್ಬರ ಕೊಲೆ – https://kundapraa.com/?p=30959 .
► ಕೋಟದಲ್ಲಿ ಸ್ನೇಹಿತರಿಬ್ಬರ ಕೊಲೆ: ರಸ್ತೆಯಲ್ಲಿ ಶವವಿಟ್ಟು ಪ್ರತಿಭಟನೆ – https://kundapraa.com/?p=30976 .
► ಸಾವಿನಲ್ಲೂ ಒಂದಾದ ಆಪ್ತ ಸ್ನೇಹಿತರು. ಮರುಗಿದ ಕೋಟ ಜನತೆ – https://kundapraa.com/?p=30979 .

 

 

Exit mobile version