Kundapra.com ಕುಂದಾಪ್ರ ಡಾಟ್ ಕಾಂ

ಹಳಗೇರಿ ತೆಂಕಬೆಟ್ಟುವಿನಲ್ಲಿ ರಕ್ತದಾನ ಶಿಬಿರ: 98 ಯುನಿಟ್ ರಕ್ತ ಸಂಗ್ರಹ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಹಳಗೇರಿ ತೆಂಕಬೆಟ್ಟು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಲ್ಲಿನ ಶ್ರೀ ಕಾಲಬೈರವ ಸೇವಾ ಸಂಘ, ಶ್ರೀ ಕಾಲಬೈರವ ಸೇವಾ ಸಮಿತಿ, ಶ್ರೀ ಬಸವೇಶ್ವರ ಭಜನಾ ಮಂದಿರ, ಅಲ್ ವಫಾ ವೆಲ್ಫೇರ್ ಸೊಸೈಟಿ ನೇತೃತ್ವದಲ್ಲಿ ಬ್ಲಡ್ ಹೆಲ್ತ್‌ಕೇರ್ ಕರ್ನಾಟಕ, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಬೈಂದೂರು ತಾಲ್ಲೂಕು ಘಟಕ ಮತ್ತು ಇಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಕುಂದಾಪುರ ರಕ್ತನಿಧಿ ಕೇಂದ್ರದ ಸಹಯೋಗದಲ್ಲಿ ಗುರುವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಜರುಗಿತು.

ಖಂಬದಕೋಣೆ ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ ಅವರು ಮೊದಲಿಗರಾಗಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿ ರಕ್ತನಿಧಿಗಳಲ್ಲಿ ರಕ್ತದ ಕೊರತೆ ಎದುರಾಗಿರುವ ಇಂದಿನ ಸನ್ನಿವೇಶದಲ್ಲಿ ರಕ್ತದಾನಕ್ಕೆ ಅತ್ಯಂತ ಹೆಚ್ಚು ಮಹತ್ವ ಇದೆ. ಗ್ರಾಮೀಣ ಪ್ರದೇಶವಾಗಿರುವ ಹಳಗೇರಿಯ ಸುತ್ತಲಿನ ಯುವಜನರು ಆಯೋಜಿಸಿರುವ ರಕ್ತದಾನ ಶಿಬಿರ ಇಲ್ಲಿ ಹೊಸ ಎಚ್ಚರ ಮೂಡಿಸುತ್ತದೆ. ರಕ್ತದಾನದಿಂದ ಜೀವನ್ಮರಣ ಸ್ಥಿತಿಯಲ್ಲಿರುವವರ ಜೀವ ಉಳಿಸಿದ ತೃಪ್ತಿ ದಾನಿಗೆ ದೊರೆಯುತ್ತದೆ. ಇದು ಎಲ್ಲ ದಾನಗಳಲ್ಲೂ ಶ್ರೇಷ್ಠವೆನಿಸಿದೆ. ನಿಯಮಿತವಾಗಿ ರಕ್ತದಾನ ಮಾಡುವವರ ಆರೋಗ್ಯ ಸ್ಥಿರವಾಗಿರುತ್ತದೆ ಎಂದು ಹೇಳಿದರು.

ಕಾಲಬೈರವ ಸೇವಾ ಸಮಿತಿಯ ಅಧ್ಯಕ್ಷ ಟಿ. ಎಸ್. ನಾಗೇಶ ಜೋಗಿ ಮಾತನಾಡಿ ಜನರು ಜಾತಿ, ಮತ ಭೇದ ಮರೆತು ಒಂದಾದರೆ ಸಮುದಾಯಕ್ಕೆ ಒಳಿತು ಮಾಡಬಹುದು ಎನ್ನುವುದಕ್ಕೆ ಇಂದಿನ ಶಿಬಿರ ಉದಾಹರಣೆ ಎಂದು ಹೇಳಿ ಎಲ್ಲರನ್ನು ಅಭಿನಂದಿಸಿದರು. ಸಮಿತಿಯ ಕಾರ್ಯದರ್ಶಿ ರಮೇಶ ಜೋಗಿ ಸ್ವಾಗತಿಸಿ, ವಂದಿಸಿದರು.

ಕಾಲಬೈರವ ಸೇವಾ ಸಂಘದ ಗೌರವಾಧ್ಯಕ್ಷ ಜಗದೀಶ ಜೋಗಿ, ಅಧ್ಯಕ್ಷ ಹರೀಶ್ ಜೋಗಿ, ರೆಡ್‌ಕ್ರಾಸ್ ಸೊಸೈಟಿ ಬೈಂದೂರು ಘಟಕದ ಸಭಾಪತಿ ನಿತಿನ್ ಶೆಟ್ಟಿ, ಖಜಾಂಚಿ ಸಂತೋಷ ಶೆಟ್ಟಿ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ನರಸಿಂಹ ಹಳಗೇರಿ, ಅಲ್ ವಫಾ ವೆಲ್ಫೇರ್ ಸೊಸೈಟಿಯ ಸ್ಥಾಪಕಾಧ್ಯಕ್ಷ ಮೂಸಾದಿಕ್, ಅಧ್ಯಕ್ಷ ಮಹಮದ್ ಮಸೂದ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಸುಮಾ ಮುತ್ತಯ್ಯ ಆಚಾರ್ಯ, ಗ್ರಾಮ ಪಂಚಾಯಿತಿ ಸದಸ್ಯ ಸುಭಾಶ್ಚಂದ್ರ ಶೆಟ್ಟಿ, ರವಿ ಶೆಟ್ಟಿ ಹಳಗೇರಿ, ಬ್ಲಡ್ ಹೆಲ್ತ್‌ಕೇರ್ ಕರ್ನಾಟಕ ಅಧ್ಯಕ್ಷ ಫಯಾಜ್ ಆಲಿ, ಜಿಲ್ಲಾ ಮುಸ್ಲಿಂ ಒಕ್ಕೂಟದ ಸದಸ್ಯ ತಬ್ರೆಜ್ ನಾಗೂರು, ಜಾಮಿಯಾ ಮಸೀದಿ ಕಾರ್ಯದರ್ಶಿ ಅಬ್ದುಲ್ ರಜಾಕ್, ಹಳಗೇರಿ ಒವರ್‌ಸೀಸ್ ಕಮಿಟಿಯ ಸ್ಥಾಪಕಾಧ್ಯಕ್ಷ ಅಬ್ದುಲ್ ಶಮಿ, ರಕ್ತನಿಧಿ ತಾಂತ್ರಿಕ ವೀರೇಂದ್ರಕುಮಾರ್ ಗುತ್ತಲ್ ಇದ್ದರು. ಶಿಬಿರದಲ್ಲಿ ೯೮ ಜನರು ರಕ್ತದಾನ ಮಾಡಿದರು.

ಇದನ್ನೂ ಓದಿ:
►► ರಕ್ತದ ಅಭಾವ ನೀಗಿಸಲು ಗಂಗೊಳ್ಳಿ ಯುವಕರಿಂದ ಸ್ವಯಂಪ್ರೇರಿತ ರಕ್ತದಾನ – https://kundapraa.com/?p=36980 .
►► ನಾವುಂದ ಫ್ರೆಂಡ್ಸ್ ನೇತೃತ್ವದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರ – https://kundapraa.com/?p=37018 .
►► ಬೈಂದೂರು: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ನೇತೃತ್ವದಲ್ಲಿ ರಕ್ತದಾನ ಶಿಬಿರ – https://kundapraa.com/?p=37039 .
►► ಗಂಗೊಳ್ಳಿ ಜಮಾತುಲ್ ಮುಸ್ಲಿಮೀನ್ ಕಮಿಟಿ ನೇತೃತ್ವದಲ್ಲಿ ರಕ್ತದಾನ ಶಿಬಿರ – https://kundapraa.com/?p=37029 .

 

Exit mobile version