ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೆಲವು ತುರ್ತು ಚಿಕಿತ್ಸೆಯ ಸಂದರ್ಭ ರಕ್ತದ ಕೊರತೆಯಿಂದ ಸಾವು ಸಂಭವಿಸುವ ಸಾಧ್ಯತೆ ಇರುತ್ತದೆ. ಅದನ್ನು ತಡೆಗಟ್ಟಿದ ಪುಣ್ಯ ರಕ್ತದಾನಿಗೆ ಸಲ್ಲುತ್ತದೆ. ಹಾಗಾಗಿ ರಕ್ತದಾನವನ್ನು ಜೀವದಾನ ಎಂದು ಪರಿಗಣಿಸಲಾಗುತ್ತದೆ ಎಂದು ನಾವುಂದ ಮೊಯಿದ್ದೀನ್ ಜುಮ್ಮಾ ಮಸೀದಿಯ ಖತೀಬ್ ಅಬ್ದುಲ್ ಲತೀಫ್ ಹೇಳಿದರು.
ನಾವುಂದ ಫ್ರೆಂಡ್ಸ್, ಹಾಗೂ ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ರಿ. ಆಶ್ರಯದಲ್ಲಿ ಇಂಡಿಯನ್ ರೆಡ್‌ಕ್ರಾಸ್ ರಕ್ತನಿಧಿಯ ಸಹಯೋಗದಲ್ಲಿ ಸೋಮವಾರ ಅಲ್ಲಿನ ಶಾದಿ ಮಹಲ್‌ನಲ್ಲಿ ನಡೆಸಿದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿನೆ ಮಾತನಾಡಿದರು.
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಫಯಾಜ್ ಅಲಿ ಮಾತನಾಡಿ ಕುಂದಾಪುರ, ಬೈಂದೂರು ಮತ್ತಿತರ ಕಡೆಗಳಿಂದ ಪ್ರತಿದಿನ ಪ್ರತಿದಿನ 5 ರಿಂದ 6 ಯೂನಿಟ್ ರಕ್ತಕ್ಕೆ ಬೇಡಿಕೆ ಬರುತ್ತಿದೆ. ಲಾಕ್‌ಡೌನ್ ನಿರ್ಬಂಧದ ಕಾರಣ ಕುಂದಾಪುರಕ್ಕೆ ಹೋಗಿ ರಕ್ತದಾನ ಮಾಡಲು ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದು ರೆಡ್‌ಕ್ರಾಸ್ ನೆರವಿನಿಂದ ಇಲ್ಲಿಯೇ ಶಿಬಿರ ಏರ್ಪಡಿಸಲಾಗಿದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಕ್ತದಾನಿಗಳಿಗೆ ಮತ್ತು ನೆರವಾದ ಎಲ್ಲರಿಗೆ ಕೃತಜ್ಞತೆಗಳು ಎಂದರು.
ಶಿಬಿರದಲ್ಲಿ 82 ಜನರು ರಕ್ತದಾನ ಮಾಡಿದರು. ನಾವುಂದ ಫ್ರೆಂಡ್ಸ್‌ನ ನೌಷಾದ್, ಜಿಲ್ಲಾ ಒಕ್ಕೂಟದ ಸದಸ್ಯ ತಬ್ರೇಜ್ ನಾಗೂರು, ಜುಮ್ಮಾ ಮಸೀದಿ ಸಮಿತಿಯ ಉಪಾಧ್ಯಕ್ಷ ಮನ್ಸೂರ್ ಇಬ್ರಾಹಿಮ್ ಮರವಂತೆ, ಬ್ಲಡ್ ಹೆಲ್ಪ್ ಕೇರ್‌ನ ಮುಬೀನ್ ಶಿರೂರು, ರಕ್ತನಿಧಿಯ ವೈದ್ಯಾಧಿಕಾರಿ ಡಾ. ಸೋನಿ, ವೀರೇಂದ್ರ ಇದ್ದರು.