ಬೀಚ್ ಬದಿಯೇ ಲಾರಿಗಳಿಗೆ ಪಾರ್ಕಿಂಗ್ ತಾಣ. ಚತುಷ್ಪಥ ಕಾಮಗಾರಿಯಿಂದ ನಿಸರ್ಗ ಸೌಂದರ್ಯ ಮರೆ. ಪ್ರವಾಸಿಗರಿಗೂ ಇಲ್ಲ ಸೂಕ್ತ ವ್ಯವಸ್ಥೆ.
ಸುನಿಲ್ ಹೆಚ್. ಜಿ. ಬೈಂದೂರು | ಕುಂದಾಪ್ರ ಡಾಟ್ ಕಾಂ ವರದಿ
ಕುಂದಾಪುರ: ಸುಂದರ ಸಮುದ್ರದೊಂದಿಗೆ ಪ್ರಾಕೃತಿಕ ಸೌಂದರ್ಯದಿಂದ ಕಂಗೊಳಿಸುತ್ತಿರುವ ಮರವಂತೆ ಕಡಲ ಕಿನಾರೆಯ ಅನುಪಮವಾದ ಸೊಬಗು ದಿನದಿಂದ ದಿನಕ್ಕೆ ಮಾಸುತ್ತಲೇ ಇದೆ. ಮೂಲಭೂತ ಸೌಕರ್ಯಗಳಿಂದ ಸೊರಗುತ್ತಿರುವ ಮರವಂತೆ ಕಡಲತೀರದಲ್ಲಿ ಒಂದೆಡೆ ಸಮುದ್ರಕ್ಕೆ ಅಡ್ಡಲಾಗಿ ಸರತಿ ಸಾಲಿನಲ್ಲಿ ನಿಲ್ಲುವ ಲಾರಿಗಳು ಹಾಗೂ ಪ್ರವಾಸಿಗರ ವಾಹನಗಳ ಸಾಲು; ಇನ್ನೊಂದೆಡೆ ಪ್ರಗತಿಯ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಇಲ್ಲಿ ಪ್ರಾಕೃತಿಕ ಸೌಂದರ್ಯವನ್ನು ಸವಿಯಲು ಬರುವವರಿಗೆ ನಿರಾಸೆ ಮೂಡಿಸುತ್ತಿದೆ. ಇಷ್ಟು ಸಾಲದೆಂಬಂತೆ ಸಮುದ್ರ ಬದಿಯಲ್ಲಿ ನಿಲ್ಲುವ ಮೀನು ಲಾರಿಗಳು ಹೊರಹಾಕುವ ಮಲಿನ ನೀರು ಗಬ್ಬುನಾತ ಬೀರುತ್ತಿದ್ದು, ತೀರದ ಬಳಿ ಒಂದು ಕ್ಷಣವೂ ನಿಲ್ಲಲಾಗದ ಪರಿಸ್ಥಿತಿ ಎದುರಾಗಿದೆ.
[quote bgcolor=”#ffffff” arrow=”yes” align=”right”]> ತ್ರಾಸಿ-ಮರವಂತೆ ಕಡಲ ಕಿನಾರೆಯ ಅಭಿವೃದ್ಧಿಯೆಂಬುದು ಈಗ ಭ್ರಮನಿರಸನ ಎಂದೆನ್ನಿಸತೊಡಗಿದೆ. ಅಭಿವೃದ್ಧಿಗೆ ಹಣ ಮಂಜುರಾಗುವುದನ್ನು ಎಂದು ಮಾತ್ರ ಕೇಳಿದ್ದೇನೆ. ಆದರೆ ಅದು ಎಷ್ಟು ಸಮರ್ಪಕವಾಗಿ ಬಳಕೆಯಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ. ಪ್ರವಾಸಿ ತಾಣಗಳೆಂದರೇ ಯಾವುದೋ ಊರನ್ನು ಬೊಟ್ಟು ಮಾಡಿ ತೋರಿಸುವ ಬದಲು ನಮ್ಮ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸುವ ಚಿಂತನೆ ನಡೆಸಬೇಕಿದೆ. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕಿದೆ. ತ್ರಾಸಿಯಲ್ಲಿನ ಪಾರ್ಕ್ ನಿರ್ವಹಣೆಯನ್ನು ಅಲ್ಲಿನ ಉತ್ಪತ್ತಿಯಿಂದಲೇ ಮಾಡಬಹುದು. ಸ್ಥಳಿಯ ಹಿತಾಸಕ್ತಿಗಳು ಈ ವಿಚಾರದಲ್ಲಿ ಆಸಕ್ತಿ ವಹಿಸಿದರೇ ಅಭಿವೃದ್ಧಿ ಸಾಧ್ಯ. – ಎಸ್. ಜನಾರ್ಧನ ಮರವಂತೆ, ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್ ಮರವಂತೆ[/quote]
ಕುಂದಾಪುರ ತಾಲೂಕಿನ ತ್ರಾಸಿ ಹಾಗೂ ಮರವಂತೆ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡು ಸುಮಾರು ಒಂದೂವರೆ ಕಿ.ಮೀ. ದೂರದ ಸಮುದ್ರ ಹಾಗೂ ಅದರ ಇನ್ನೊಂದು ಬದಿಯಲ್ಲಿ ತುಂಬಿ ಸೌಪರ್ಣಿಕಾ ನದಿ ತುಂಬಿ ಹರಿಯುತ್ತದೆ. ಇಂತಹ ರಮ್ಯ ಮನೋಹರ ದೃಶ್ಯವನ್ನು ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ. ಆ ಕಾರಣದಿಂದಲೇ ಮರವಂತೆ ಬೀಚ್ ವಿಶ್ವ ವಿಖ್ಯಾತಿಯನ್ನು ಪಡೆದಿದೆ. ಆದರೆ ಪ್ರವಾಸೋದ್ಯಮ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಇಲ್ಲಿನ ಅಭಿವೃದ್ಧಿ ಕಾರ್ಯಗಳು ಮಾತ್ರ ನೆನೆಗುದಿಗೆ ಬಿದ್ದಿದೆ. ಅಭಿವೃದ್ಧಿಪಡಿಸುವುದು ಬಿಡಿ, ಇರುವ ಪಾಕೃತಿಕ ಸೌಂದರ್ಯವನ್ನಾದರೂ ಇರುವ ಹಾಗೇ ಸವಿಯಲು ಅನುವು ಮಾಡಿಕೊಡಿ ಎಂದು ಪ್ರವಾಸಿಗರು ಕೇಳುತ್ತಿದ್ದಾರೆ.
ಸಮುದ್ರಕ್ಕೆ ಅಡ್ಡಲಾಗಿ ನಿಲ್ಲುವ ಲಾರಿಗಳು:
ತ್ರಾಸಿ-ಮರವಂತೆ ಬೀಚ್ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಸಮುದ್ರಕ್ಕೆ ಅಡ್ಡಲಾಗಿ ಹತ್ತಾರು ಲಾರಿಗಳು ಠಿಕಾಣಿ ಹೂಡುತ್ತವೆ. ದೊಡ್ಡ ಕಂಟೈನರ್‌ಗಳು, ಮೀನು ಸಾಗಾಟ ವಾಹನ ಸೇರಿದಂತೆ ಸಾಲು ಹಿಡಿದು ವಿವಿಧ ವಾಹನಗಳು ನಿಲ್ಲುತ್ತವೆ. ಇದು ಸಮುದ್ರದ ಸೊಬಗನ್ನು ಸವಿಯುವವರಿಗೆ ಅಡ್ಡಿಯನ್ನುಂಟುಮಾಡುತ್ತಿದೆ. ಅಷ್ಟೇ ಅಲ್ಲದೇ ಮೀನು ಲಾರಿಗಳಿಂದ ಹೊರಹಾಕುವ ನೀರು ಅಲ್ಲೇ ನಿಂತು ಗಬ್ಬುನಾತ ಬೀರುತ್ತವೆ. ಇಷ್ಟಕ್ಕೇ ಮುಗಿಯದೇ ಲಾರಿ ನಿಲ್ಲುವ ಪರಿಸರದ ನೈರ್ಮಲ್ಯವೂ ಕೆಡುತ್ತಿದೆ. (ಕುಂದಾಪ್ರ ಡಾಟ್ ಕಾಂ)
ಪ್ರವಾಸಿಗರಿಗೆ ಪಾರ್ಕಿಂಗ್, ಮಾಹಿತಿ, ವಸತಿ ಇಲ್ಲ:
ಸಾಮಾನ್ಯವಾಗಿ ರಾಷ್ಟ್ರೀಯ ಹೆದ್ದಾರಿಯ ಪ್ರಯಾಣಿಕರೇ ಇಲ್ಲಿನ ಬಹುಪಾಲು ಪ್ರವಾಸಿಗರಾದುದರಿಂದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿಯೇ ವಾಹನವನ್ನು ನಿಲ್ಲಿಸಿ ಸಮುದ್ರ ತೀರಕ್ಕೆ ತೆರಳುತ್ತಾರೆ. ಅವರೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಾರೆ. ಮರವಂತೆ ಕಡಲ ಕಿನಾರೆ ಎಷ್ಟು ದೊಡ್ಡದಿದೆ. ಎಲ್ಲಿ ನೀರಿಗೆ ಇಳಿಯಬಹುದು ಇತ್ಯಾದಿ ಮಾಹಿತಿಗಳುಳ್ಳ ಫಲಕವೂ ಇಲ್ಲಿಲ್ಲ. ಸಸೂತ್ರವಾದ ಪಾರ್ಕಿಂಗ್ ವ್ಯವಸ್ಥೆಯೂ ಇಲ್ಲ. ಉಳಿದುಕೊಳ್ಳಲು ಉತ್ತಮ ವಸತಿ ಸೌಕರ್ಯವೂ ಇಲ್ಲ. (ಕುಂದಾಪ್ರ ಡಾಟ್ ಕಾಂ)
ಚಥುಷ್ಪಥ ಕಾಮಗಾರಿ:
ಮರವಂತೆಯಲ್ಲಿ ಕುಂದಾಪುರ – ಹೊನ್ನಾವರ ಚತುಷ್ಪಥ ಕಾಮಗಾರಿ ನಡೆಯುತ್ತಿದ್ದು ರಸ್ತೆ ಅಗಲಿಕರಣ, ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಹೊಳೆ ಸಮುದ್ರವನ್ನು ಒಟ್ಟಿಗೆ ಕಾಣಬಹುದಾದ ನಿಗರ್ಸದತ್ತ ಪರಿಸರಕ್ಕೆ ಇದು ಅಡ್ಡಿ ಉಂಟುಮಾಡಿದೆ. ಚತುಷ್ಪಥದ ರಸ್ತೆಗೆ ಮರವಂತೆಯ ಸೌಪರ್ಣಿಕ ಹೊಳೆಗೆವ ಸೇತುವೆ ನಿರ್ಮಾಣವಾಗುತ್ತಿರುವುದರಿಂದ ನಿಸರ್ಗ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಅವಕಾಶ ಪ್ರವಾಸಿಗರಿಗೆ ತಪ್ಪಿಹೋಗಿದೆ.
ಅರೆಬರೆ ಅಭಿವೃದ್ಧಿ ಕಾಮಗಾರಿ:
ಮರವಂತೆ ಬೀಚ್ ಅಭಿವೃದ್ಧಿಗಾಗಿ 2-3 ವರ್ಷದ ಹಿಂದೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆದಿತ್ತು. ಅಂದಿನ ಸಭೆಯಲ್ಲಿ ಅಭಿವೃದ್ಧಿ ಸಮಿತಿ, ಉಪಸಮಿತಿಗಳು ರಚನೆಯಾದವು. ಆದರೆ ಲಾರಿ ನಿಲ್ಲಿಸಬಾರದು, ಗೂಡಂಗಡಿಗಳ ಎತ್ತಂಗಡಿ, ವಾಹನ ಪಾರ್ಕಿಂಗ್ ಸೌಲಭ್ಯ, ತ್ರಾಸಿಯಲ್ಲಿರುವ ಪಾರ್ಕಿನಲ್ಲಿ ಮಕ್ಕಳ ಜಾರುಬಂಡಿ ಇತ್ಯಾದಿ ನಿರ್ಮಾಣಕ್ಕೆ ಯೋಚಿಲಾಯಿತೇ ಹೊರತು ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.
ಅಭಿವೃದ್ಧಿಗಿಲ್ಲ ಕಾಯಕಲ್ಪ:
ವಿಶ್ವಪ್ರಸಿದ್ಧ ತಾಣವನ್ನು ಹೀಗೆ ಪ್ರವಾಸೋದ್ಯಮ ಇಲಾಖೆ ಕಡೆಗಣಿಸುತ್ತಿರುವುದು ಮಾತ್ರ ವ್ಯವಸ್ಥೆಯ ಲೋಪಕ್ಕೆ ಹಿಡಿದ ಕನ್ನಡಿಯಂತಿದೆ. ಸ್ಥಳಿಯರ ಅಸಕಾರವೂ ಇದರಲ್ಲಿ ಎದ್ದು ಕಾಣುತ್ತಿದೆ. ತ್ರಾಸಿ ಪಾರ್ಕ್ ಅಭಿವೃದ್ಧಿ, ಬೀಚ್ ಬಳಿ ಕುಳಿತುಕೊಳ್ಳಲು ವ್ಯವಸ್ಥಿತವಾದ ಕಲ್ಲಿನ ಬೆಂಚು, ವಿದ್ಯುತ್ ದೀಪ್, ಕುಡಿಯುವ ನೀರಿನ ವ್ಯವಸ್ಥೆ, ವ್ಯವಸ್ಥಿತ ಶೌಚಾಲಯ, ಪಾರ್ಕಿಂಗ್ ಸೌಲಭ್ಯ, ಪಾರ್ಕಿಂಗ್ ಇರುವಲ್ಲಿಯೇ ಅಂಗಡಿ ಕೋಣೆ, ಮಾಹಿತಿದಾರರು ಸೇರಿದಂತೆ ಅಲ್ಲಿ ಮೂಲಭೂತ ಸೌಕರ್ಯಗಳನನ್ನು ಒದಗಿಸಿಕೊಟ್ಟರೇ, ಪ್ರವಾಸಿಗರ ಸಂಖ್ಯೆಯೂ ಹೆಚ್ಚತ್ತದೆ. ಆದಾಯವೂ ಹೆಚ್ಚುತ್ತದೆ ಎಂಬುದು ಊರಿನ ಕೆಲವರ ಅಂಬೋಣ.
